ಕೊಲೆ ಪ್ರಕರಣ:ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್,ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ

ಚಂಡೀಗಡ: ಸುಮಾರು ಎರಡು ದಶಕಗಳ ಹಿಂದೆ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ಸಿಂಗ್ ಹಾಗೂ ಇತರ ನಾಲ್ವರಿಗೆ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಉಳಿದ ನಾಲ್ವರು ಅಪರಾಧಿಗಳೆಂದರೆ: ಕೃಷ್ಣ ಲಾಲ್, ಜಸ್ಬೀರ್ ಸಿಂಗ್, ಅವತಾರ್ ಸಿಂಗ್ ಹಾಗೂ ಸಬ್ದಿಲ್.
ಗುರ್ಮೀತ್ ರಾಮ್ ಸಿಂಗ್ ರೂ.31 ಲಕ್ಷ ದಂಡವನ್ನೂ ಪಾವತಿಸಬೇಕು. ಇತರ ಅಪರಾಧಿಗಳಾದ ಅಬ್ದಿಲ್ ರೂ.1.5 ಲಕ್ಷ, ಕೃಷ್ಣನ್ ಹಾಗೂ ಜಸ್ಬೀರ್ ತಲಾ ರೂ. 1.25 ಲಕ್ಷ ಪಾವತಿಸಬೇಕು ಹಾಗೂ ಅವತಾರ್ ರೂ. 75,000 ಪಾವತಿಸಬೇಕು.
ಈ ಮೊತ್ತದ ಶೇಕಡಾ ಐವತ್ತರಷ್ಟು ಮೊತ್ತವು ರಂಜಿತ್ ಸಿಂಗ್ ಅವರ ಕುಟುಂಬಕ್ಕೆ ಹೋಗುತ್ತದೆ.
ಪ್ರಕರಣದ ಆರನೇ ಆರೋಪಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದ.
ಈ ತಿಂಗಳ ಆರಂಭದಲ್ಲಿ ಹರಿಯಾಣದ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಐವರೂ ತಪ್ಪಿತಸ್ಥರೆಂದು ಘೋಷಿಸಿತು.
ನ್ಯಾಯಾಲಯವು ಈ ಪ್ರಕರಣದ ಆದೇಶವನ್ನು ಆಗಸ್ಟ್ 18 ರಂದು ಕಾಯ್ದಿರಿಸಿತ್ತು. ಇದನ್ನು ಆಗಸ್ಟ್ 26 ರಂದು ಘೋಷಿಸಬೇಕಿತ್ತು. ಆದರೆ ರಂಜಿತ್ ಸಿಂಗ್ ಅವರ ಪುತ್ರ ಜಗಸೀರ್ ಸಿಂಗ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪ್ರಕರಣವನ್ನು ಮತ್ತೊಂದು ಸಿಬಿಐ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಕೋರಿದ್ದರು.