ಅಕ್ಟೋಬರ್ 25ರಿಂದಲೇ 1ನೇ ತರಗತಿಯಿಂದ ಶಾಲೆ ಆರಂಭ: ರಾಜ್ಯ ಸರಕಾರ ಆದೇಶ

ಬೆಂಗಳೂರು, ಅ.18: ಕೋವಿಡ್ ಸೋಂಕು ಹಿನ್ನೆಲೆ ಹಲವು ದಿನಗಳಿಂದ ಬಂದ್ ಆಗಿದ್ದ ಪ್ರಾಥಮಿಕ ಶಾಲೆಗಳನ್ನು ಪುನಾರಂಭಿಸಲು ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದ್ದು, ಇದರನ್ವಯ ಅ.25ರಿಂದ 1 ರಿಂದ 5ನೇ ತರಗತಿ ಆರಂಭವಾಗಲಿದೆ.
ಸೋಮವಾರ ಈ ಕುರಿತು ಇಲ್ಲಿನ ಕೆಆರ್ ವೃತ್ತದ ಸರ್ವ ಶಿಕ್ಷಣ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್, ರಾಜ್ಯದಲ್ಲಿ ಈ ತಿಂಗಳ 25ರಿಂದ 1 ರಿಂದ 5 ನೇ ತರಗತಿಯ ಭೌತಿಕ ತರಗತಿ ಆರಂಭಕ್ಕೆ ತಜ್ಞರ ಸಮಿತಿ ಹಸಿರು ನಿಶಾನೆ ತೋರಿದೆ. ಇನ್ನೆರಡು ದಿನದಲ್ಲಿ ಸಂಬಂಧ ಹೊಸ ಮಾರ್ಗಸೂಚಿ ಪ್ರಕಟಿಸುವುದಾಗಿ ಹೇಳಿದರು.
ರಾಜ್ಯ ವ್ಯಾಪಿ ಕೋವಿಡ್ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿದ್ದು, ಹಲವು ತಾಲೂಕುಗಳಲ್ಲಿ ಶೂನ್ಯ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ, ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಮೇರೆಗೆ ಪ್ರಾಥಮಿಕ ಶಾಲಾ ತರಗತಿ ಆರಂಭ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಾಲೆ ಆರಂಭ ಹಿನ್ನೆಲೆ ಶಾಲಾ ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು. ಜತೆಗೆ ಮಾಸ್ಕ್ ಸೇರಿದಂತೆ ಇನ್ನಿತರೆ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದ ಅವರು, ಪ್ರಾಥಮಿಕ ಶಾಲೆಗಳಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೆÇೀಷಕರ ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲೆ ಆರಂಭ ಹಿನ್ನೆಲೆಯಲ್ಲಿ ಮೊದಲ ವಾರ ಅರ್ಧ ದಿನ ಮಾತ್ರ ನಡೆಯಲಿದೆ. ನ.1 ರಂದು ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದ ಅವರು, ಪ್ರಾಥಮಿಕ ಶಾಲೆ ಆರಂಭಿಸಿದ ಮಾದರಿಯಲ್ಲಿಯೇ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಕುರಿತು ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ನಾಗೇಶ್ ಮಾಹಿತಿ ನೀಡಿದರು.
ಬಿಸಿಯೂಟ ಇಲ್ಲ
ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮಕ್ಕಳಿಗೆ ಬಿಸಿಯೂಟ ನೀಡುವುದಕ್ಕೆ ತಡೆ ವಿಧಿಸಲಾಗಿದೆ. ನವೆಂಬರ್ ನಂತರ ಇವರಿಗೂ ಬಿಸಿಯೂಟ ಯೋಜನೆ ವಿಸ್ತರಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನಿಯಮಗಳೇನು?
► ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಆನ್‍ಲೈನ್ ಮತ್ತು ಆಫ್‍ಲೈನ್ ಎರಡೂ ತರಗತಿಗೂ ಅವಕಾಶ
► ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲಾ ತರಗತಿ ನಡೆಯಲಿದೆ. ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಛತಾ ಕಾರ್ಯಕ್ಕೆ ಅವಕಾಶ
► ಮೊದಲಿಗೆ, ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ.
► ಒಂದು ದಿನ ತರಗತಿ ಒಂದು ದಿನ ರಜೆ.
► ಪಾಸಿಟಿವಿಟಿ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆ, ತಾಲೂಕು, ವಲಯಗಳಲ್ಲಿ ಮಾತ್ರ ಶಾಲೆ ಆರಂಭ.
► ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಒಪ್ಪಿಗೆ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ಇಲ್ಲದೆ ಇರುವ ಅಂಶ ಪೋಷಕರು ದೃಢೀಕರಿಸಬೇಕು.
► 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು.
► ಕೋವಿಡ್ ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ
► ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
ಮಧ್ಯಾಹ್ನದ ಊಟ ಹಾಗೂ ಅನುದಾನವನ್ನು ಒದಗಿಸಿ
ಸರಕಾರ ಅ. 25 ರಿಂದ ಕಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ನಿರಂತರ ಶಾಲಾ ಮುಚ್ಚುವಿಕೆ ಅಪೌಷ್ಟಿಕತೆಯ ವಿಷಯದಲ್ಲಿ ಮಕ್ಕಳಿಗೆ ದುರಂತದ ಪರಿಣಾಮಗಳನ್ನು ಉಂಟುಮಾಡಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು ಈಗ 116 ದೇಶಗಳಲ್ಲಿ 101 ನೇ ಸ್ಥಾನದಲ್ಲಿದೆ ಮತ್ತು ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶದ ಮಧ್ಯಾಹ್ನದ ಊಟವನ್ನು ನೀಡುವುದು ಅವರ ಪೌಷ್ಟಿಕಾಂಶವನ್ನು ಪರಿಹರಿಸಲು ಇನ್ನೂ ಮುಖ್ಯವಾಗಿದೆ.
ದೀರ್ಘಕಾಲ ಶಾಲೆಗಳು ಮುಚ್ಚಿದ್ದರಿಂದ, ಅನೇಕ ಶಾಲೆಗಳು ಕಟ್ಟಡಗಳು, ತರಗತಿ ಕೊಠಡಿಗಳು, ಶೌಚಾಲಯಗಳು, ಕುಡಿಯುವ ನೀರು ಮತ್ತು ಇತರ ಮೂಲಸೌಕರ್ಯಗಳು ದುರಸ್ತಿಯಾಗಿದ್ದು ಸಣ್ಣ ಹಾಗು ದೊಡ್ಡ ದುರಸ್ತಿಗೆ ಬಂದಿವೆ. ಶಾಲೆಗಳು ಪ್ರಾರಂಭವಾಗುತ್ತಿರುವುದರಿಂದ ದುರಸ್ತಿ ಮತ್ತು ನಿರ್ವಹಣೆ ಅತ್ಯಗತ್ಯವಾಗಿದೆ. ಮಕ್ಕಳ ಸಂಪೂರ್ಣ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಶಾಲೆಯು ಮಕ್ಕಳನ್ನು ಮುಕ್ತವಾಗಿ ನಿರ್ಭಯವಾಗಿ ಆಹ್ವಾನಿಸುವಂತೆ ಮಾಡಲು ತಕ್ಷಣ ಎಲ್ಲಾ ಸರಕಾರಿ ಹಾಗು ಅನುದಾನಿತ ಶಾಲೆಗಳು ತ್ವರಿತಗತಿಯಲ್ಲಿ ದುರಸ್ತಿ ಕೈಗೊಳ್ಳಲು ಸಹಾಯವಾಗುವಂತೆ ಮುಕ್ತ ಅನುದಾನದ ತುರ್ತು ಅಗತ್ಯವಿದೆ. ಕಲಿಕೆಯಲ್ಲಿನ ಅಂತರವನ್ನು ನಿವಾರಿಸಲು ಮಕ್ಕಳಿಗೆ ಪೂರಕ ಕಲಿಕಾ ಸಂಪನ್ಮೂಲ ಸಾಮಗ್ರಿಗಳು ಬೇಕಾಗಿರುವುದರಿಂದ, ಶಾಲೆಗಳು ಹೆಚ್ಚುವರಿ ಕಲಿಕಾ ಸಾಮಗ್ರಿಗಳ ಮೇಲೆ ಖರ್ಚು ಮಾಡುವಂತಿರಬೇಕು. ಶಿಕ್ಷಕರ ಕೊರತೆಯಿರುವಲ್ಲಿ, ಖಾಲಿ ಹುದ್ದೆಗಳಿಂದ ಅಥವಾ ಖಾಸಗಿ ಶಾಲೆಗಳಿಂದ ಹೆಚ್ಚಿದ ಒಳಹರಿವು, ಸರಕಾರಿ ಮತ್ತು ಅನುದಾನಿತ ಶಾಲೆಗಳು ಅಗತ್ಯವಿರುವಂತೆ ಬೋಧನಾ ಸಹಾಯಕರನ್ನು ನೇಮಿಸಿಕೊಳ್ಳಬೇಕು, ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸುತ್ತೇವೆ.
-ಡಾ.ನಿರಂಜನಾರಾಧ್ಯ ವಿ.ಪಿ., ಗುರುಮೂರ್ತಿ ಕಾಶಿನಾಥನ್, ಶಿಕ್ಷಣ ತಜ್ಞರು







