ಟ್ವೆಂಟಿ-20 ವಿಶ್ವಕಪ್:ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಐರ್ಲೆಂಡ್ನ ಕರ್ಟಿಸ್ ಕ್ಯಾಂಫರ್

photo: AFP
ಅಬುಧಾಬಿ, ಅ.18: ಐರ್ಲೆಂಡ್ನ ವೇಗದ ಬೌಲರ್ ಕರ್ಟಿಸ್ ಕ್ಯಾಂಫರ್ ಅವರು ಸೋಮವಾರ ಟ್ವೆಂಟಿ -20 ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು.
ಕ್ಯಾಂಫರ್(4-26) ಅವರು ಕಾಲಿನ್ ಅಕೆರ್ಮಾನ್ (11), ರಯಾನ್ ಟೆನ್ ಡೋಸ್ಚೇಟ್ (0) ಹಾಗೂ ಸ್ಕಾಟ್ ಎಡ್ವರ್ಡ್ಸ್ (0) ಅವರನ್ನು ಪೆವಿಲಿಯನ್ ಗೆ ವಾಪಸ್ ಕಳುಹಿಸಿ ಹ್ಯಾಟ್ರಿಕ್ ಪೂರೈಸಿದರು. ನಂತರ ರೋಲೋಫ್ ವ್ಯಾನ್ ಡೆರ್ ಮೆರ್ವ್ (0) ಅವರನ್ನು ಔಟ್ ಮಾಡಿದರು.
ಕರ್ಟಿಸ್ ಅವರು ಅಫ್ಘಾನಿಸ್ತಾನದ ರಶೀದ್ ಖಾನ್ ಹಾಗೂ ಶ್ರೀಲಂಕಾದ ಲಸಿತ್ ಮಾಲಿಂಗ ನಂತರ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡರು.
ಜೋಹಾನ್ಸ್ಬರ್ಗ್ನಲ್ಲಿ ಜನಿಸಿರುವ ಕ್ಯಾಂಫರ್ ಪುರುಷರ ಟ್ವೆಂಟಿ-20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಆಟಗಾರನಾಗಿದ್ದಾರೆ. 2007 ರಲ್ಲಿ ಚೊಚ್ಚಲ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾದ ವೇಗದ ಬೌಲರ್ ಬ್ರೆಟ್ ಲೀ ಈ ಸಾಧನೆ ಮಾಡಿದ್ದರು.
22 ವರ್ಷದ ಕ್ಯಾಂಫರ್ ಈ ವರ್ಷದ ಆರಂಭದಲ್ಲಿ ಝಿಂಬಾಬ್ವೆ ವಿರುದ್ಧ ಡಬ್ಲಿನ್ ನಲ್ಲಿ ಟ್ವೆಂಟಿ-20 ಕ್ರಿಕೆಟಿಗೆ ಪಾದಾರ್ಪಣೆ ಮಾಡಿದಾಗಿನಿಂದ ತನ್ನ ಹಿಂದಿನ ನಾಲ್ಕು ಪಂದ್ಯಗಲ್ಲಿ 19 ರನ್ ಗೆ 3 ವಿಕೆಟ್ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು.