ಅ. 25ರಿಂದ ಉಡುಪಿ ಜಿಲ್ಲೆಯಲ್ಲಿ ಒಂದನೇ ತರಗತಿಯಿಂದ ಶಾಲೆಗಳ ಪುನರಾರಂಭಕ್ಕೆ ಅನುಮತಿ

ಸಾಂದರ್ಭಿಕ ಚಿತ್ರ
ಉಡುಪಿ, ಅ.18: ಜಿಲ್ಲೆಯಲ್ಲಿ ಅ.25ರಿಂದ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಪುನಹ ತೆರೆಯಲು ಕೋವಿಡ್-19 ಸೂಕ್ತ ನಡವಳಿಕೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಣ ಇಲಾಖೆಯಿಂದ ನೀಡಲಾದ ಎಸ್ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಅನುಮತಿ ನೀಡ ಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶದಲ್ಲಿ ತಿಳಿಸಿದ್ದಾರೆ.
ಈಗಾಗಲೇ ಆರನೇ ತರಗತಿಯಿಂದ ಭೌತಿಕ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಇದೀಗ ಒಂದರಿಂದ ಐದನೇ ತರಗತಿಯವರೆಗಿನ ಕ್ಲಾಸ್ಗಳ ಪ್ರಾರಂಭಕ್ಕೆ ಅನುಮತಿ ದೊರೆಯುವುದರೊಂದಿಗೆ ಸುಮಾರು ಎರಡೂವರೆ ವರ್ಷಗಳ ಬಳಿಕ ರಾಜ್ಯದಲ್ಲಿ ಶಾಲೆಗಳು ಪುನರಾರಂಭಗೊಳ್ಳಲು ಕ್ಷಣಗಣನೆ ಪ್ರಾರಂಭಗೊಂಡಂತಾಗಿದೆ.
ನಿಬಂಧನೆಗಳು: 1ರಿಂದ 5ನೇ ತರಗತಿಗಳ ಪ್ರಾರಂಭಕ್ಕೆ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ. ದೈಹಿಕ ತರಗತಿಗಳಿಗೆ ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಕೋವಿಡ್-19 ರೋಗಲಕ್ಷಣಗಳ ಬಗ್ಗೆ ಸ್ಕೃಿನೀಂಗ್ ಮಾಡಬೇಕು. ತರಗತಿ ಕೊಠಡಿಯ ಶೇ.50 ಸಾಮರ್ಥ್ಯಕ್ಕೆ ಅನುಗುಣವಾಗಿ ತರಗತಿಗಳನ್ನು ನಡೆಸಬೇಕು. ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಒದಗಿಸಬೇಕು.
ಪ್ರಾಯೋಗಿಕವಾಗಿ ಸಾಧ್ಯವಿದ್ದರೆ ಒಂದು ಮೀ.ದೈಹಿಕ ಅಂತರವನ್ನು ಕಾಪಾಡ ಬೇಕು. ವಿಶೇಷವಾಗಿ ಶಾಲಾ ಪ್ರವೇಶ ಮತ್ತು ನಿರ್ಗಮನ ಪ್ರದೇಶದಲ್ಲಿ ಗುಂಪು ಗೂಡುವುದನ್ನು ನಿರ್ಬಂಧಿಸಲಾಗಿದೆ. ಶೇ.1 ಸೋಡಿಯಂ ಹೈಪೋಕ್ಲೋಕೈಟ್ ದ್ರಾವಣವನ್ನು ಬಳಸಿ ತರಗತಿ ಕೊಠಡಿಗಳು ಹಾಗೂ ವಿಶ್ರಾಂತಿ ಕೊಠಡಿಗಳನ್ನು ಪ್ರತಿದಿನ ಸೋಂಕು ರಹಿತಗೊಳಿಸಬೇಕು.
ಒಂದರಿಂದ 5ನೇ ತರಗತಿಯಲ್ಲಿ ಕೋವಿಡ್-19 ಲಸಿಕೆಯ ಎರಡು ಡೋಸ್ ಲಸಿಕೆಯನ್ನು ಪಡೆದಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಮಾತ್ರ ಅವಕಾಶ ನೀಡಬೇಕು. 50ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷಕರು ಫೇಸ್ಶೀಲ್ಡ್ಗಳನ್ನು ಹೆಚ್ಚುವರಿ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಈಜುಕೊಳಗಳ ಬಳಕೆಗೆ ಷರತ್ತು: ಈಜುಕೊಳಗಳನ್ನು ಕೆಲವು ಷರತ್ತು ಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಪ್ರತಿ ಬ್ಯಾಚ್ನ ಶೇ.50ರಷ್ಟು ಮಂದಿಗೆ ಮಾತ್ರ ಅನುಮತಿ, ಈಜುಕೊಳ್ಳದ ಪ್ರವೇಶದ್ವಾರದಲ್ಲೇ ಅನುಮತಿ ಇರುವ ಸಂಖ್ಯೆಯ ಪ್ರದರ್ಶನ. ಪ್ರವೇಶದ ವೇಳೆ ಎಲ್ಲರನ್ನೂ ಜ್ವರ ಹಾಗೂ ಉಸಿರಾಟದ ಲಕ್ಷಣಗಳಿಗೆ ತಪಾಸಣೆ ನಡೆಸಬೇಕು. ರೋಗಲಕ್ಷಣ ರಹಿತರಿಗೆ ಮಾತ್ರ ಅವಕಾಶ ನೀಡಬೇಕು.
ಎರಡು ಡೋಸ್ ಲಸಿಕೆ ಪ್ರಮಾಣ ಪತ್ರಗಳನ್ನು ಹೊಂದಿರುವವರಿಗೆ ಮಾತ್ರ ಅನುಮತಿ ನೀಡಬೇಕು. ಪ್ರತಿ ಬ್ಯಾಚ್ನ ನಂತರ ಈಜುಗಾರರು ಉಪಯೋಗಿಸಿದ ವಿಶ್ರಾಂತಿ ಕೊಠಡಿಗಳು, ನಡೆದಾಡಿದ ಜಾಗಗಳು ಹಾಗೂ ಇತರ ಪ್ರದೇಶಗಳನ್ನು ಶೇ.1 ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಬಳಸಿ ಸ್ವಚ್ಚಗೊಳಿಸಬೇಕು.
ಈ ಎಲ್ಲಾ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ವಿಕೋಪ ನಿರ್ವಹಣಾ ಕಾಯ್ದೆ 2005, ಕರ್ನಾಟಕ ಎಪಿಡಮಿಕ್ ಡೀಸಿಸ್ ಆ್ಯಕ್ಟ್ 2020 ಹಾಗೂ ಐಪಿಸಿ ಸೆಕ್ಷನ್ 188ರ ಪ್ರಕಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತನ್ನ ಆದೇಶದಲ್ಲಿ ಎಚ್ಚರಿಸಿದ್ದಾರೆ.







