ಉಡುಪಿಯಲ್ಲಿ ‘ಹರ್ಷ’ ಅತಿದೊಡ್ಡ ನೂತನ ಮಳಿಗೆ ಶುಭಾರಂಭ

ಉಡುಪಿ, ಅ.18: ಗೃಹೋಪಕರಣ ವಸ್ತುಗಳ ಮಾರಾಟದಲ್ಲಿ ಮೂರು ದಶಕಗಳ ಅನುಭವ ಹೊಂದಿದ ‘ಹರ್ಷ’ ಸಂಸ್ಥೆಯ ಅತಿ ದೊಡ್ಡ ನೂತನ ಮಳಿಗೆಯು ಉಡುಪಿಯ ಹೃದಯಭಾಗದ ಸಿಟಿ ಬಸ್ ನಿಲ್ದಾಣ ಸಮೀಪದ ಶ್ರೀದತ್ತ ಕೃಪಾ ಬಿಲ್ಡಿಂಗ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು.
ಹರ್ಷ ಸಂಸ್ಥೆಯ 16ನೇ ಮಳಿಗೆಯನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಇಂದು ಹರ್ಷ ಸಂಸ್ಥೆ ಬೃಹದಾಕಾರ ವಾಗಿ ಬೆಳೆದು ನಿಂತಿದೆ. ಬೋಳ ಪೂಜಾರಿಯ ಸಂಕಲ್ಪದಿಂದಾಗಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಈ ಬೃಹತ್ ಮಳಿಗೆಯಿಂದ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ದೊರೆಯಲಿದೆ. ಇಂದಿನ ಅವಶ್ಯಕತೆಗೆ ಅನುಗುಣವಾಗಿ ಸಂಸ್ಥೆಯು ಬೆಳವಣಿಗೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ಮುಂಬೈ ಸೇರಿದಂತೆ ದೇಶಾದ್ಯಂತ ಮಳಿಗೆಯನ್ನು ತೆರೆದು ರಾಷ್ಟ್ರಮಟ್ಟಕ್ಕೆ ವಿಸ್ತರಿಸಬೇಕು ಎಂದು ಹಾರೈಸಿದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ವಿಶ್ವಾಸಾರ್ಹತೆಗೆ ಇನ್ನೊಂದು ಹೆಸರು ಹರ್ಷ. ಇವರ ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ಇದಕ್ಕೆ ಕಾರಣ. ಈ ಸಂಸ್ಥೆ ಉದ್ಯೋಗ ನೀಡುವ ಮೂಲಕ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ. ಅದೇ ರೀತಿ ಸಾಮಾಜಿಕ ಬದ್ಧತೆಗೆ ಕೂಡ ಈ ಸಂಸ್ಥೆಗೆ ಇದೆ. ಈ ಬೃಹತ್ ಮಳಿಗೆಯಿಂದ ಉಡುಪಿಯ ಜನತೆಗೆ ಹರ್ಷದ ಜೊತೆ ಮೆರುಗು ತಂದಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಎಂ.ಸೋಮಶೇಖರ್ ಭಟ್, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಮಣಿಪಾಲದ ಕೆನರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ರಾಮ ನಾಕ್, ಚಿತ್ರಾಪುರ ಮಠದ ಪರವಾಗಿ ರಾಮ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಮಣಿಪಾಲ್ ಟೆಕ್ನೋಲಜೀಸ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಗೌತಮ್ ಪೈ ವಹಿಸಿದ್ದರು.
ವಿಶೇಷ ಸೆಲೆಬ್ರಿಟಿ ಅತಿಥಿಯಾಗಿ ಆಗಮಿಸಿದ ಇಂಡಿಯನ್ ಐಡಾಲ್ ಸ್ಪರ್ಧೆಯ ಟಾಪ್ 5 ಫೈನಲಿಸ್ಟ್ ನಿಹಾಲ್ ತಾವ್ರೋ ಅವರನ್ನು ಈ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕ ಸೂರ್ಯಪ್ರಕಾಶ್ ಸ್ವಾಗತಿಸಿದರು. ಬಿ.ಎನ್. ಅಮೀನ್ ವಂದಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಉಡುಪಿಯಲ್ಲಿ ಈಗಾಗಲೇ ಹರ್ಷ ಸಂಸ್ಥೆಯ ಎರಡು ಮಳಿಗೆಗಳು ಕಾರ್ಯಾ ಚರಿಸುತ್ತಿದ್ದು, ಇದು ಮೂರನೇ ಮಳಿಗೆ ಆಗಿದೆ. ವಿಶಾಲವಾಗಿರುವ ‘ಹರ್ಷ’ದ ನೂತನ ಮಳಿಗೆಯು 4 ಅಂತಸ್ತುಗಳ ಅಂತಾರಾಷ್ಟ್ರೀಯ ಮಟ್ಟದ ಡಿಸ್‌ಪ್ಲೇ ಯೊಂದಿಗೆ ಗ್ರಾಹಕರಿಗೆ ಶಾಪಿಂಗ್‌ನ ವಿಶೇಷ ಅನುಭವ ನೀಡುತ್ತಿದೆ. 40 ಸಾವಿರ ಚದರದಡಿ ಸ್ಥಳಾವಕಾಶವಿರುವ ಸಂಪೂರ್ಣ ಹವಾನಿಯಂತ್ರಿತ ‘ಹರ್ಷ’ದಲ್ಲಿ ವೈವಿಧ್ಯಮಯ ಉತ್ಪನ್ನಗಳ ವಿಶಾಲ ಶ್ರೇಣಿಯ್ನು ವೀಕ್ಷಿಸಬಹುದು.
ತಮ್ಮ ಆಯ್ಕೆಯ ವಿಶ್ವವಿಖ್ಯಾತ ಬ್ರಾಂಡ್‌ನ ಗೃಹೋಪಯೋಗಿ ಉಪಕರಣ ಗಳನ್ನು ಒಂದೇ ಸೂರಿನಡಿ ಖರೀದಿಸುವ ಸೌಲಭ್ಯ ಇಲ್ಲಿನ ಗ್ರಾಹಕರಿಗೆ ದೊರೆಯಲಿದೆ. ಉತ್ಕೃಷ್ಟ ಗೃಹೋಪಕರಣಗಳ ಜೊತೆಗೆ ಅಡುಗೆಯ ಸಾಧನಗಳು, ಹೊಚ್ಚ-ಹೊಸ ಡಿಜಿಟಲ್ ತಂತ್ರಜ್ಞಾನದ ವಸ್ತು-ವೈವಿಧ್ಯಗಳು, ಫರ್ನಿಚರ್‌ಗಳು ಹಾಗೂ ಫಿಟ್ನೆಸ್ ಸಂಬಂಧಿತ ಉಪಕರಣಗಳು ಇಲ್ಲಿ ಲಭ್ಯ.












