ಕೇರಳ ಮಳೆ, ಭೂಕುಸಿತ: ದಲಾಯಿ ಲಾಮಾ ಆರ್ಥಿಕ ನೆರವು

ಧರ್ಮಸಾಲ(ಹಿ.ಪ್ರ), ಅ. 18: ಭಾರೀ ಮಳೆ ಹಾಗೂ ಭೂಕುಸಿತದಿಂದ ಕೇರಳದಲ್ಲಾದ ಜೀವ ಹಾಗೂ ಸೊತ್ತು ಹಾನಿ ಬಗ್ಗೆ ದಲಾಯಿ ಲಾಮಾ ಅವರು ಸೋಮವಾರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ದಲಾಯಿ ಲಾಮಾ ಅವರು, ‘‘ದುರಂತದಲ್ಲಿ ಸಂತ್ರಸ್ತರಾದ, ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಹಾಗೂ ನಿಮಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ’’ ಎಂದಿದ್ದಾರೆ.
‘‘ಅಗತ್ಯ ಇರುವವರಿಗೆ ನೆರವು ನೀಡಲು ರಾಜ್ಯ ಸರಕಾರ ಹಾಗೂ ಸಂಬಂಧಿತ ಪ್ರಾಧಿಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದು ನನಗೆ ಅರ್ಥವಾಗುತ್ತಿದೆ. ನನ್ನ ಸಹಾನುಭೂತಿಯ ಸಂಕೇತವಾಗಿ ರಕ್ಷಣಾ ಹಾಗೂ ಪರಿಹಾರ ಕಾರ್ಯಕ್ಕೆ ದಲಾಯಿ ಲಾಮಾ ಟ್ರಸ್ಟ್ನಿಂದ ದೇಣಿಗೆ ನೀಡುತ್ತೇನೆ ’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಕೇರಳದಲ್ಲಿ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ ಸೋಮವಾರ ಬೆಳಗ್ಗೆ 23ಕ್ಕೆ ಏರಿಕೆಯಾಗಿದೆ. ಭಾರೀ ಮಳೆಯಿಂದಾಗಿ ಕೊಟ್ಟಾಯಂ ಹಾಗೂ ಇಡುಕ್ಕಿ ಜಿಲ್ಲೆಯ ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಹಾಗೂ ಪ್ರವಾಹ ಸೃಷ್ಟಿಯಾಗಿ ಈ ದುರಂತ ಸಂಭವಿಸಿತ್ತು.