ರಾಜಧಾನಿಯಲ್ಲಿ ಮುಂದುವರಿದ ಮಳೆ ಅವಾಂತರ

ಬೆಂಗಳೂರು, ಅ.18: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಸೋಮವಾರ ಸುರಿದ ಮಳೆಯಿಂದಾಗಿ ಮೂರು ಮನೆಗಳು ಕುಸಿಯುವ ಭೀತಿಯಲ್ಲಿದ್ದರೆ, ಹಲವು ಕಡೆಗಳಲ್ಲಿ ಮರಗಳು ನೆಲಕ್ಕುರಳಿವೆ.
ಹೆಸರಘಟ್ಟ ರಸ್ತೆಯ ಚಿಮನಿ ಹಿಲ್ಸ್‍ನ ಸೌಂದರ್ಯ ಲೇಔಟ್ ನಿರ್ಮಾಣಕ್ಕಾಗಿ ಭೂಮಿ ಅಗೆಯಲಾಗಿತ್ತು. ಶ್ರೀನಿವಾಸ್, ಸುರೇಶ್, ನಾಗರಾಜ್, ಗುಂಡಪ್ಪ ನಾಲ್ವರು ಸೇರಿ ಚಿಮಣಿ ಹಿಲ್ಸ್ ಲೇಔಟ್ ನಿರ್ಮಿಸಿದ್ದರು. 2014ರಲ್ಲಿ ಚಿಮಣಿ ಹಿಲ್ಸ್ ಲೇಔಟ್ ನಿರ್ಮಾಣವಾಗಿತ್ತು. ಲೇಔಟ್‍ಗಾಗಿ ನಿರ್ಮಾಣವಾಗಿರುವ ಮನೆಯ ಪಕ್ಕದಲ್ಲಿ ಹೆಚ್ಚು ಮಣ್ಣು ಅಗೆಯಲಾಗಿದೆ. ಮನೆಯ ಪಕ್ಕದಲ್ಲೇ ಬೇಕಾಬಿಟ್ಟಿಯಾಗಿ ಮಾಲಕರು ಲೇಔಟ್ ನಿರ್ಮಿಸಿದ್ದರು. ಆದರೆ, ಕಳಪೆ ಕಾಮಗಾರಿಯಿಂದ ಮಳೆಯ ಹೊಡೆತಕ್ಕೆ ತಡೆಗೋಡೆ ಕುಸಿದಿದೆ.
ತಡೆಗೋಡೆ ಕುಸಿದ ಪರಿಣಾಮ ಮನೆಯ ಪಾಯಕ್ಕೆ ಸೇರಿದ ಮಣ್ಣು ಕೂಡ ಕುಸಿದಿದೆ. ಹೀಗಾಗಿ, ಮೂರು ಮನೆಗಳು ಕುಸಿಯುವ ಭೀತಿ ಎದುರಾಗಿದೆ. ಮನೆಯೊಳಗೆ ಗೋಡೆಗಳು ಬಿರುಕು ಬಿಟ್ಟಿದೆ. ಮನೆಯ ಮಾಲಕರು ಜೀವ ಭಯದಲ್ಲಿ ಬದುಕುವಂತಾಗಿದೆ. ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ಮನೆ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದಾರೆ.
ನಿರಂತರ ಮಳೆಯಿಂದ ಕುಸಿದುಬಿದ್ದ ಕಾಂಪೌಂಡ್ ತೆರವುಗೊಳಿಸಲಾಗಿದೆ. ಹಾನಿಯಾಗಿರುವ ಗೋಡೆಯನ್ನು ತೆರವು ಮಾಡಿ, ಹೊಸದಾಗಿ ಗೋಡೆ ನಿರ್ಮಾಣ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ.
ಶಾಂತಿನಗರದಲ್ಲಿ ಎಷ್ಟೋ ಮನೆಗಳು ಕುಸಿಯುವ ಹಂತದಲ್ಲಿವೆ. ಗ್ರೌಂಡ್ ಫ್ಲೋರ್ ನಲ್ಲಿ ಯಾರೂ ವಾಸ ಮಾಡುತ್ತಿಲ್ಲ. ಆದರೆ ಮಳೆ ಬಂದರೆ ಸಾಕು, ಮನೆ ಒಳಗೆ ಬರುತ್ತದೆ. ಮಳೆ ನೀರು ನುಗ್ಗುತ್ತದೆ. ಪ್ರತಿದಿನ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ ಇಲ್ಲಿನ ನಿವಾಸಿಗಳು. ಯಾವಾಗ ಮನೆ ಬೀಳುತ್ತೋ, ಏನಾಗುತ್ತೋ ಎಂಬ ಭಯ ಅವರನ್ನು ಕಾಡುತ್ತಿದೆ.






.jpg)

