ಉತ್ತರಪ್ರದೇಶ ಚುನಾವಣೆ: ಶೇ.40ರಷ್ಟು ಸೀಟು ಮಹಿಳೆಯರಿಗೆ ಕಾಯ್ದಿರಿಸಿದ ಕಾಂಗ್ರೆಸ್

ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಶೇಕಡ 40 ರಷ್ಟು ಟಿಕೆಟ್ ಅನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
"ಕಾಂಗ್ರೆಸ್ ಪಕ್ಷದಲ್ಲಿ ನಾವು 2022 ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.40 ಟಿಕೆಟ್ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದೇವೆ. ಮಹಿಳೆಯರು ಬದಲಾವಣೆಯನ್ನು ತರಬಹುದು ಹಾಗೂ ಅವರು ಮುಂದೆ ಹೆಜ್ಜೆ ಹಾಕಬೇಕು" ಎಂದು ಪ್ರಿಯಾಂಕಾ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ಈ ನಿರ್ಧಾರವು ಬದಲಾವಣೆಯನ್ನು ಬಯಸುವ, ಏಕತೆಯಲ್ಲಿ ನಂಬಿಕೆ ಮತ್ತು ನ್ಯಾಯಕ್ಕಾಗಿ ನಿಲ್ಲುವ ಉತ್ತರಪ್ರದೇಶದಲ್ಲಿರುವ ಪ್ರತಿಯೊಬ್ಬ ಮಹಿಳೆಗಾಗಿ… ತನ್ನ ಕುಟುಂಬ ಹಾಗೂ ತನ್ನ ರಾಜ್ಯಕ್ಕೆ ಉತ್ತಮ ಜೀವನ ನೀಡಲು ಹೋರಾಡುತ್ತಿರುವವರಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಮೂರು ವರ್ಷಗಳ ಹಿಂದೆ ತನ್ನ ಸಹೋದರ ರಾಹುಲ್ ಗಾಂಧಿಯವರಿಂದ ಉತ್ತರ ಪ್ರದೇಶ ಗೆಲ್ಲುವ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.
ನವೆಂಬರ್ 15 ರವರೆಗೆ ವಿವಿಧ ಸೀಟುಗಳಿಗೆ ಅರ್ಜಿ ಸಲ್ಲಿಸಲು ಮಹಿಳೆಯರನ್ನು ಆಹ್ವಾನಿಸಿದ ಪ್ರಿಯಾಂಕಾ, ಮಹಿಳಾ ಅಭ್ಯರ್ಥಿಗಳ ಆಯ್ಕೆಯು ಸಂಪೂರ್ಣವಾಗಿ ಅರ್ಹತೆಯನ್ನು ಆಧರಿಸಿರುತ್ತದೆ ಎಂದು ಹೇಳಿದರು.







