"ನೋಟು ನಿಷೇಧದ ಅರಿವಿರಲಿಲ್ಲ":ತನ್ನ ಉಳಿತಾಯದ 65,000 ರೂ.ವಿನಿಮಯಕ್ಕಾಗಿ ವೃದ್ಧ ಭಿಕ್ಷುಕನ ಮನವಿ

ಚೆನ್ನೈ: ತಮಿಳುನಾಡಿನಲ್ಲಿ 65 ವರ್ಷ ವಯಸ್ಸಿನ ಅಂಧ ವ್ಯಕ್ತಿಯೊಬ್ಬರು ಒಟ್ಟು 65,000 ರೂ.ಮೊತ್ತದ ತಮ್ಮ ಹಳೆಯ (ರದ್ದಾಗಿರುವ ನೋಟು) 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಹಾಯ ಕೋರಿ ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಭಿಕ್ಷಾಟನೆಯ ಮೂಲಕ ಗಳಿಸಿದ ಉಳಿತಾಯ ಹಣ ಇದಾಗಿದೆ ಎಂದು ಅಂಧ ವ್ಯಕ್ತಿ ಹೇಳಿದ್ದಾರೆ.
ಚಿನ್ನಕಣ್ಣು ಎಂಬ ಈ ವ್ಯಕ್ತಿ ಕೃಷ್ಣಗಿರಿ ಜಿಲ್ಲೆಯ ಚಿನ್ನಗೌಂಡನೂರು ಗ್ರಾಮದವರು. ಚಿನ್ನಕಣ್ಣು ತನ್ನ ಐದನೇ ವಯಸ್ಸಿನಿಂದ ದೃಷ್ಟಿಹೀನರಾಗಿದ್ದು, ಭಿಕ್ಷೆ ಬೇಡುವ ಮೂಲಕ ತನ್ನ ಹಳ್ಳಿಯ ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.
ಪರಿಸ್ಥಿತಿಯ ಬಗ್ಗೆ ಪ್ರಶ್ನಿಸಿದಾಗ, "ನಾನು ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದೆ. ತನ್ನ ಜೀವಿತಾವಧಿಯ ಉಳಿತಾಯ 65,000 ರೂ.ಗಳನ್ನು ಎಲ್ಲಿ ಇರಿಸಲಾಗಿತ್ತು ಎಂಬುದನ್ನು ಮರೆತ್ತಿದ್ದೆ. ಕೆಲವೇ ದಿನಗಳ ಹಿಂದೆ ನನ್ನ ಹಣ ನನಗೆ ಸಿಕ್ಕಿತು. ನೋಟು ಅಮಾನ್ಯೀಕರಣದ ಕಾರಣದಿಂದಾಗಿ ತನ್ನ ಜೀವಿತಾವಧಿಯ ಉಳಿತಾಯ ಮೊತ್ತವನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ ಎಂದು ನಂತರ ತಿಳಿದುಕೊಂಡೆ'' ಎಂದು ನ್ಯೂಸ್ 18ಕ್ಕೆ ತಿಳಿಸಿದರು.
"ತಾನು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದೇನೆ ಹಾಗೂ ತನ್ನ ವೃದ್ಧಾಪ್ಯದಲ್ಲಿ ಹಣವನ್ನು ಬಳಸುವ ಭರವಸೆಯೊಂದಿಗೆ ಅದನ್ನು ಉಳಿತಾಯ ಮಾಡಿದ್ದೇನೆ" ಎಂದು ಹೇಳಿದರು.







