ಸಿ.ಎಂ. ಇಬ್ರಾಹಿಮ್ಗೆ ಕಾಂಗ್ರೆಸ್ ಪಕ್ಷದಲ್ಲಿ ಆದ ಅನ್ಯಾಯವೇನು?: ಝಮೀರ್ ಅಹ್ಮದ್ ಪ್ರಶ್ನೆ

ಝಮೀರ್ ಅಹ್ಮದ್
ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಮ್ ಅವರಿಗೆ ಕಾಂಗ್ರೆಸ್ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ಆಗಿರುವ ಅನ್ಯಾಯವಾದರೂ ಏನು? ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ಚಾಮರಾಜಪೇಟೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರ ಚುನಾವಣೆಯಲ್ಲಿ ಸ್ಪರ್ಧಿಸದೆ, ತನ್ನೊಂದಿಗೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಇರು, ನಾನು ನಿನಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿ.ಎಂ.ಇಬ್ರಾಹಿಮ್ಗೆ ಸಿದ್ದರಾಮಯ್ಯ ಹೇಳಿದ್ದರು. ಆದರೂ, ಹಠ ಬಿಡದೆ ಹಾಲಿ ಶಾಸಕ ಸಂಗಮೇಶ್ ಅವರಿಗೆ ಕೈ ಬಿಟ್ಟು, ಇಬ್ರಾಹಿಮ್ಗೆ ಟಿಕೆಟ್ ನೀಡಿದರು ಎಂದರು.
ತನ್ನ ತವರು ಭದ್ರಾವತಿಯಲ್ಲಿ ಇಬ್ರಾಹಿಮ್ ಮತಗಳಿಕೆಯಲ್ಲಿ ಮೂರನೆ ಸ್ಥಾನ ಪಡೆದರು. ಆದರೂ, ಸಿದ್ದರಾಮಯ್ಯ ಇಬ್ರಾಹಿಮ್ ಅವರಿಗೆ ಎರಡು ಬಾರಿ ವಿಧಾನಪರಿಷತ್ ಸದಸ್ಯರನ್ನಾಗಿ ಹಾಗೂ ಒಮ್ಮೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಿದರು. ಪಕ್ಷ ಇವರಿಗೆ ಇನ್ನೇನು ಮಾಡಬೇಕಿತ್ತು ಎಂದು ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡಿದರು ಎಂದು ಈಗ ಆರೋಪಿಸುವ ಇಬ್ರಾಹಿಮ್, ಸರಕಾರ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲೇ ಯಾಕೆ ವಿರೋಧ ಮಾಡಿಲ್ಲ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಯಾಕೆ? ಭಾಷಣ ಮಾಡಿದ್ದು ಯಾಕೆ? ಎಂದು ಅವರು ಕೇಳಿದರು.
1994ರಲ್ಲಿ ಸಿ.ಎಂ.ಇಬ್ರಾಹಿಮ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು. ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ಆನಂತರ ದೇವೇಗೌಡರು ಪ್ರಧಾನಿಯಾದಾಗ, ಇಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕಿತ್ತು. ಆದರೆ, ಜೆ.ಎಚ್.ಪಟೇಲ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿಎಂ ಸ್ಥಾನದ ಬಗ್ಗೆ ಪ್ರಶ್ನಿಸುವವರು 1994ರಲ್ಲಿ ಯಾಕೆ ಧ್ವನಿ ಎತ್ತಲಿಲ್ಲ ಎಂದು ಝಮೀರ್ ಅಹ್ಮದ್ ಪ್ರಶ್ನಿಸಿದರು.
ಕುಮಾರಸ್ವಾಮಿ ವಿರುದ್ಧ ಕಿಡಿ: ಅಲ್ಪಸಂಖ್ಯಾತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಘೋಷಣೆ ಮಾಡಲಿ ನೋಡೋಣ. 2006ರಲ್ಲಿ ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರಕಾರ ರಚನೆ ಮಾಡಿದಾಗ 20 ತಿಂಗಳ ನಂತರ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡುವ ಮಾತುಕತೆ ಆಗಿತ್ತು. ಆದರೆ, ಎಲ್ಲಿ ಎಚ್.ಡಿ.ರೇವಣ್ಣ ಉಪ ಮುಖ್ಯಮಂತ್ರಿಯಾಗುತ್ತಾನೋ ಎಂದು ಯಡಿಯೂರಪ್ಪಗೆ ಅಧಿಕಾರ ಬಿಟ್ಟುಕೊಟ್ಟಿಲ್ಲ ಎಂದು ಅವರು ದೂರಿದರು.
ಸ್ವಂತ ಅಣ್ಣನನ್ನು ಸಹಿಸದವರು, ನಮ್ಮನ್ನು ಸಹಿಸಿಕೊಳ್ಳುತ್ತಾರಾ. ಅಲ್ಪಸಂಖ್ಯಾತರನ್ನು ಬಿಡಿ, ಕುಮಾರಸ್ವಾಮಿ ತಮ್ಮ ಒಕ್ಕಲಿಗ ಸಮಾಜದ ಯಾವ ನಾಯಕರನ್ನು ಬೆಳೆಸಿದ್ದಾರೆ ಹೇಳಲಿ. ಎರಡು ಬಾರಿ ಮುಖ್ಯಮಂತ್ರಿ ಆದಾಗ ಎಷ್ಟು ಮಂದಿ ಅಲ್ಪಸಂಖ್ಯಾತರನ್ನು ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಿದ್ದರು ಪಟ್ಟಿ ಕೊಡಲಿ. ಇದೇ ಸಿದ್ದರಾಮಯ್ಯ ಸರಕಾರದಲ್ಲಿ ಎಷ್ಟು ಮಂದಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿತ್ತು ಅನ್ನೋದರ ಬಗ್ಗೆ ನಾನು ಪಟ್ಟಿ ಕೊಡುತ್ತೇನೆ. ಕಾರ್ಯಕರ್ತರ ಕೈಗೆ ಅಧಿಕಾರ ಕೊಡದೆ ಅನ್ಯಾಯ ಮಾಡಿದರು ಎಂದು ಝಮೀರ್ ಅಹ್ಮದ್ ಖಾನ್ ದೂರಿದರು.
ದೇವೇಗೌಡರು ಈಗಲೂ ಶೇ.200ರಷ್ಟು ಜಾತ್ಯತೀತ ನಾಯಕ. ಆದರೆ, ಅವರಲ್ಲಿನ ಶೇ.1ರಷ್ಟು ಜಾತ್ಯತೀತತೆ ಕೂಡ ಕುಮಾರಸ್ವಾಮಿ ಅವರಲ್ಲಿ ಇಲ್ಲ. ಅಲ್ಪಸಂಖ್ಯಾತರಿಗೆ ಅವರು ಏನು ಮಾಡಿದ್ದಾರೆ ಅನ್ನೋದನ್ನು ತೋರಿಸಲಿ. ರಾಮನಗರ ಜೆಡಿಎಸ್ ಭದ್ರಕೋಟೆ 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಸ್ಪರ್ಧಿಸಿದ್ದರು. ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣ ಎರಡು ಕಡೆ ಸ್ಪರ್ಧೆ ಮಾಡಿದರು. ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದಿದ್ದರೆ ರಾಮನಗರ ಉಪ ಚುನಾವಣೆಯಲ್ಲಿ ಇಕ್ಬಾಲ್ಗೆ ಸ್ಥಾನ ಬಿಟ್ಟು ಕೊಡಬೇಕಿತ್ತು ಎಂದು ಝಮೀರ್ ಅಹ್ಮದ್ ಹೇಳಿದರು.
ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದಾಗ 2004ರಲ್ಲಿ ಪಕ್ಷ 58 ಸ್ಥಾನಗಳನ್ನು ಗಳಿಸಿತ್ತು. ಆನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಎಲ್ಲ ಸಮಾಜದವರು ಪ್ರೀತಿಸುವಂತಹ ಒಳ್ಳೆಯ ಜನಪ್ರಿಯ ನಾಯಕರಾದರು. 20 ತಿಂಗಳು ಒಳ್ಳೆಯ ಸರಕಾರ ನೀಡಿದರು. 2008ರಲ್ಲಿ ಪುನಃ ಚುನಾವಣೆ ನಡೆದಾಗ 28 ಸ್ಥಾನ, 2013ರಲ್ಲಿ 40 ಸ್ಥಾನ, 2018ರಲ್ಲಿ 37 ಸ್ಥಾನಗಳನ್ನು ಜೆಡಿಎಸ್ ಪಡೆಯಿತು. ಸಿದ್ದರಾಮಯ್ಯ ಇದ್ದಾಗ ಪಡೆದಿದ್ದ ಸಂಖ್ಯಾಬಲವನ್ನು ತಲುಪಲು ಕುಮಾರಸ್ವಾಮಿಗೆ ಆಗಿಲ್ಲ ಎಂದು ಅವರು ಟೀಕಿಸಿದರು.
ಎಂ.ಸಿ.ಮನಗೂಳಿ ಅವರಿಗೆ ಬಿಜೆಪಿಯವರು 30 ಕೋಟಿ ರೂ.ಆಫರ್ ಕೊಟ್ಟಿದ್ದರು. ಆದರೆ, ಅವರು ಹಣ, ಅಧಿಕಾರದ ಆಸೆಗಾಗಿ ತಾನು ನಂಬಿದ ಪಕ್ಷವನ್ನು ಬಿಟ್ಟುಕೊಟ್ಟಿಲ್ಲ. ಅವರ ಮಗ ಈಗ ಕಾಂಗ್ರೆಸ್ಗೆ ಬಂದು ಅಭ್ಯರ್ಥಿಯಾಗಿದ್ದಾರೆ. ಮನಗೂಳಿ ಕುಟುಂಬದ ಮೇಲೆ ಪ್ರೀತಿ ಇದ್ದಿದ್ದರೆ ಸಿಂದಗಿಯಲ್ಲಿ ಅಭ್ಯರ್ಥಿ ಹಾಕಬಾರದಿತ್ತು. ಕುಮಾರಸ್ವಾಮಿ ಈಗ ಆರೆಸ್ಸೆಸ್ ಅನ್ನು ಟೀಕಿಸುತ್ತಿರುವುದು ಅಲ್ಪಸಂಖ್ಯಾತರನ್ನು ತನ್ನ ಕಡೆ ಸೆಳೆಯಲು ಎಂದು ಅವರು ದೂರಿದರು.







