"ಪೆಟ್ರೋಲ್ ಬೆಲೆ 200 ರೂ.ಗೆ ತಲುಪಿದರೆ ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಗೆ ಅವಕಾಶ ನೀಡಲಾಗುವುದು"
ಅಸ್ಸಾಂ ಬಿಜೆಪಿ ವರಿಷ್ಠ

ಗುವಾಹತಿ, ಅ. 19: ರಾಜ್ಯದಲ್ಲಿ ಪೆಟ್ರೋಲ್ ಬೆಲೆ 200 ರೂಪಾಯಿಗೆ ತಲುಪಿದರೆ, ದ್ವಿಚಕ್ರ ವಾಹನಗಳಲ್ಲಿ ಮೂವರಿಗೆ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಅಸ್ಸಾಂ ಬಿಜೆಪಿ ವರಿಷ್ಠ ಭೂಪೇಶ್ ಕಾಲಿಟಾ ಹೇಳಿದ್ದಾರೆ. ಕೆಳ ಅಸ್ಸಾಂನ ತಾಮುಲ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೂಪೇಶ್ ಕಾಲಿಟಾ ಈ ಹೇಳಿಕೆ ನೀಡಿದ್ದಾರೆ.
49ರ ಹರೆಯದ ಮಾಚಿ ಸಚಿವ ಭೂಪೇಶ್ ಕಾಲಿಟಾ ಅವರನ್ನು ಕಳೆದ ವರ್ಷ ಜೂನ್ನಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿತ್ತು. ಭೂಪೇಶ್ ಕಾಲೀಟ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್ ಅಚ್ಚರಿ ವ್ಯಕ್ತಪಡಿಸಿದೆ.
‘‘ಆಡಳಿತಾರೂಢ ಬಿಜೆಪಿಯ ಅಧ್ಯಕ್ಷ ಭೂಪೇಶ್ ಕಾಲೀಟ ಅವರು ಈ ರೀತಿಯ ಹೇಳಿಕೆ ನೀಡುತ್ತಿರುವುದು ಕಳವಳಕಾರಿ ವಿಚಾರ. ಅವರು ತಮಾಷೆಗೆ ಈ ಹೇಳಿಕೆ ನೀಡಿದ್ದಾರೆಯೇ ? ಅಥವಾ ಅವರೇ ತಮಾಷೆಗೆ ಒಳಗಾಗಲು ಈ ಹೇಳಿಕೆ ನೀಡಿದ್ದಾರೆಯೇ ? ಅಥವಾ ಗಂಭೀರವಾಗಿ ಈ ಹೇಳಿಕೆ ನೀಡಿದ್ದಾರೆಯೇ ?’’ ಎಂದು ಅಸ್ಸಾಂ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಬೊಬ್ಬೀಟ ಶರ್ಮಾ ಪ್ರಶ್ನಿಸಿದ್ದಾರೆ.
ಕಾರಣ ಏನೇ ಇರಲಿ, ತೈಲ ಬೆಲೆ ಏರಿಕೆಯ ಕುರಿತು ಇಂತಹ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿರುವುದು ಅಗತ್ಯದ ವಸ್ತುಗಳು ಹಾಗೂ ತೈಲ ಬೆಲೆ ಏರಿಕೆಯ ಕಾರಣದಿಂದ ಸಂಕಷ್ಟ ಎದುರಿಸುತ್ತಿರುವ ಕಾರ್ಮಿಕರಿಗೆ ಅವಮಾನ ವಾಡಿದಂತೆ ಎಂದು ಶರ್ಮಾ ಹೇಳಿದ್ದಾರೆ.







