ಜಮ್ಮುಕಾಶ್ಮೀರದಲ್ಲಿ ನಾಗರಿಕ ಹತ್ಯೆ ಪ್ರಕರಣ: ಕಣಿವೆ ತ್ಯಜಿಸುತ್ತಿರುವ ವಲಸೆ ಕಾರ್ಮಿಕರು

ಶ್ರೀನಗರ, ಅ. 19: ಜಮ್ಮು ಹಾಗೂ ಕಾಶ್ಮೀರದಲ್ಲಿ ರವಿವಾರ ಬೆಳಗ್ಗೆ ಮತ್ತೆ ಇಬ್ಬರು ವಲಸೆ ಕಾರ್ಮಿಕರನ್ನು ಹತ್ಯೆಗೈಯಲಾಗಿದೆ. ಇದರೊಂದಿಗೆ ಜಮ್ಮು ಕಾಶ್ಮೀರದಲ್ಲಿ ಈ ತಿಂಗಳು ಹತ್ಯೆಯಾದ ನಾಗರಿಕರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ಜಮ್ಮು ಹಾಗೂ ಕಾಶ್ಮೀರ ತ್ಯಜಿಸುತ್ತಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಸೇರಿದಂತೆ ಹಲವು ಭದ್ರತಾ ವಿಷಯಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಹೊಸದಿಲ್ಲಿಯಲ್ಲಿ ಸೋಮವಾರ ಸಭೆ ನಡೆಯಿತು. ದೇಶಾದ್ಯಂತದ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಅರೆ ಸೇನಾ ಪಡೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾರಾದ್ವಾಜ್ ಅವರು, ಕೆಲಸಕ್ಕೆಂದು ತೆರಳುವ ಕಾರ್ಮಿಕರನ್ನು ಗುರಿಯಾಗಿರಿಸಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಹತ್ಯೆ ನಡೆಸುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಈ ಬಗ್ಗೆ ತಾನು ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು. ಜಮ್ಮು ಕಾಶ್ಮೀರದಲ್ಲಿ ಹತ್ಯೆಯಾದ ಬಿಹಾರದ ವಲಸೆ ಕಾರ್ಮಿಕರ ಕುಟುಂಬಕ್ಕೆ ನಿತೀಶ್ ಕುಮಾರ್ ಅವರು ತಲಾ 2 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ. ಅಲ್ಲದೆ, ವಲಸೆ ಕಾರ್ಮಿಕರನ್ನು ರಕ್ಷಿಸಲು ಅಲ್ಲಿನ ಆಡಳಿತ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಕೆಲಸಕ್ಕೆ ದೇಶದ ಯಾವುದೇ ಮೂಲೆಗೂ ತೆರಳುವ ಹಕ್ಕು ನಾಗರಿಕರಿಗೆ ಇದೆ ಎಂದು ಅವರು ಹೇಳಿದರು.







