ಜಮ್ಮುಕಾಶ್ಮೀರ ಸೇನಾ ಪಡೆಯಿಂದ ಶೋಧ ಕಾರ್ಯಾಚರಣೆ: ಮನೆಯಿಂದ ಹೊರಗಿಳಿಯದಂತೆ ನಾಗರಿಕರಿಗೆ ನಿರ್ದೇಶ
ಜಮ್ಮು, ಅ. 19: ಜಮ್ಮು ಹಾಗೂ ಕಾಶ್ಮೀರದ ಅವಳಿ ಗಡಿ ಜಿಲ್ಲೆಗಳಾದ ಪೂಂಚ್ ಹಾಗೂ ರಾಜೌರಿಯಲ್ಲಿ ಶಂಕಿತ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮಂಗಳವಾರ 9ನೇ ದಿನಕ್ಕೆ ಕಾಲಿರಿಸಿದೆ. ಆದುದರಿಂದ ಮೆಂಧರ್ನ ನಿವಾಸಿಗಳು ತಮ್ಮ ಸುರಕ್ಷೆಗಾಗಿ ಮನೆಯಿಂದ ಹೊರಗಿಳಿಯದಂತೆ ಸೇನೆ ಸಾರ್ವಜನಿಕ ಘೋಷಣೆ ಮೂಲಕ ಎಚ್ಚರಿಕೆ ನೀಡಿದೆ.
ಪೂಂಚ್ ಜಿಲ್ಲೆಯ ಮೆಂಧರ್ನ ಅರಣ್ಯ ಪ್ರದೇಶಗಳಲ್ಲಿ ಅಡಗಿದ್ದಾರೆ ಎಂದು ಹೇಳಲಾದ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆ ಅಂತಿಮ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವುದುರಿಂದ ಭಟ್ಟಾ ದುರೈನ್ ಹಾಗೂ ಸಮೀಪದ ಪ್ರದೇಶಗಳಲ್ಲಿರುವ ಸ್ಥಳೀಯ ಮಸೀದಿಗಳ ಮೂಲಕ ಸಾರ್ವಜನಿಕ ಘೋಷಣೆ ಮಾಡಿ ಮನೆಯಿಂದ ಹೊರಗಿಳಿಯದಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿರುವುದರಿಂದ ಅರಣ್ಯ ಪ್ರದೇಶಕ್ಕೆ ತೆರಳದಂತೆ ಹಾಗೂ ತಮ್ಮ ಜಾನುವಾರಗಳನ್ನು ಕಾಡಿಗೆ ಬಿಡದಂತೆ ಹೊರಗೆ ಹೋದವರು ತಮ್ಮ ಜಾನುವಾರುಗಳೊಂದಿಗೆ ಮನೆಗೆ ಹಿಂದಿರುಗುವಂತೆ ಎಂದು ಸೇನೆ ಸೂಚನೆ ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೂಂಚ್ನ ಸುರಾನ್ಕೋಟ್ ಅರಣ್ಯದಲ್ಲಿ ಅಕ್ಟೋಬರ್ 11ರಂದು ಆರಂಭಗೊಂಡ ಶಂಕಿತ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯ ಸಂದರ್ಭ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಕಿರಿಯ ಕಮಿಷನ್ಡ್ ಅಧಿಕಾರಿ ಹಾಗೂ ನಾಲ್ವರು ಯೋಧರು ಪ್ರಾಣ ಕಳೆದುಕೊಂಡಿದ್ದರು. ಭದ್ರತಾ ಪಡೆ ಗುರುವಾರ ಮೆಂಧರ್ನ ನಾರ್ ಖಾಸ್ ಅರಣ್ಯವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ಗುಂಡಿನ ಚಕಮಕಿಯಲ್ಲಿ ಇನ್ನೋರ್ವ ಕಿರಿಯ ಕಮಿಷನ್ಡ್ ಅಧಿಕಾರಿ ಹಾಗೂ ಇತರ ನಾಲ್ವರು ಯೋಧರು ಪಾ್ರಣ ಕಳೆದುಕೊಂಡಿದ್ದರು.