ಹೊಸ ರಾಜಕೀಯ ಪಕ್ಷ ಘೋಷಿಸಿದ ಅಮರೀಂದರ್ ಸಿಂಗ್
'ರೈತರ ಪ್ರತಿಭಟನೆ ಬಗೆಹರಿದರೆ ಬಿಜೆಪಿಯೊಂದಿಗೆ ಕೈಜೋಡಿಸುವ ಸುಳಿವು'

ಚಂಡಿಗಡ: ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾದ ದೀರ್ಘಕಾಲದ ಒಳಜಗಳದ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಒಂದು ತಿಂಗಳ ನಂತರ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶೀಘ್ರದಲ್ಲೇ ತಮ್ಮದೇ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ಘೋಷಿಸಿದರು. ಈಗ ನಡೆಯುತ್ತಿರುವ ರೈತರ ಪ್ರತಿಭಟನೆ ರೈತರ ಹಿತದೃಷ್ಟಿಯಿಂದ ಬಗೆಹರಿದರೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸುವುದಾಗಿ ಸುಳಿವು ನೀಡಿದ್ದಾರೆ.
ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಅವರ ಸರಣಿ ಟ್ವೀಟ್‌ಗಳಲ್ಲಿ, ಮಾಜಿ ಪಂಜಾಬ್ ಸಿಎಂ "ಪಂಜಾಬ್‌ನ ಭವಿಷ್ಯದ ಹೋರಾಟ ನಡೆಯುತ್ತಿದೆ ಹಾಗೂ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸೇರಿದಂತೆ ರಾಜ್ಯ ಮತ್ತು ಅದರ ಜನರ ಹಿತಾಸಕ್ತಿಗಳನ್ನು ಪೂರೈಸಲು ತನ್ನದೇ ರಾಜಕೀಯ ಪಕ್ಷವನ್ನು ಆರಂಭಿಸುವ ಕುರಿತು ಶೀಘ್ರವೇ ಘೋಷಿಲಿದ್ದಾರೆ'' ಎಂದರು.
"ಪ್ರತಿಭಟನಾ ನಿರತ ರೈತರ ಹಿತದೃಷ್ಟಿಯಿಂದ ಕೃಷಿ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಷರತ್ತಿನ ಮೇರೆಗೆ ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸೀಟು ವ್ಯವಸ್ಥೆ ಮಾಡುವ ಭರವಸೆಯಿದೆ. ಅಕಾಲಿದಳದಿಂದ ಬೇರ್ಪಟ್ಟಿರುವ ಗುಂಪುಗಳಾದ ದಿಂಡಸ ಹಾಗೂ ಬ್ರಹ್ಮಪುರ ಬಣಗಳಂತಹ ಸಮಾನ ಮನಸ್ಕ ಪಕ್ಷಗಳೊಂದಿಗಿನ ಮೈತ್ರಿಯನ್ನೂ ಎದುರು ನೋಡುತ್ತಿದ್ದೇವೆ" ಎಂದು ಅವರು ಹೇಳಿದರು.





