ಉತ್ತರಾಖಂಡದಲ್ಲಿ ದಾಖಲೆ ಮಳೆ, ಭೀಕರ ಪ್ರವಾಹ: ಸಾವಿನ ಸಂಖ್ಯೆ 40ಕ್ಕೆ

Photo source: PTI
ನೈನಿತಾಲ್/ ಡೆಹ್ರಾಡೂನ್, ಅ.20: ಉತ್ತರಾಖಂಡದಲ್ಲಿ ದಾಖಲೆ ಪ್ರಮಾಣದ ಮಳೆ ಬಿದ್ದಿದ್ದು, ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮನೆಗಳು ಹಾಗೂ ಜನ ನೀರುಪಾಲಾಗಿದ್ದರೆ, ರಸ್ತೆಗಳು ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಸಾವಿನ ಸಂಖ್ಯೆ 40ನ್ನು ದಾಟಿದ್ದು, ನೈನಿತಾಲ್ ಜಿಲ್ಲೆಯಲ್ಲಿ ಕನಿಷ್ಠ 18 ಮಂದಿ ಜೀವ ಕಳೆದುಕೊಂಡಿದ್ದಾರೆ.
ಹಲವು ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಸಾವಿನ ವಾಸ್ತವ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಇದೆ. ಜಿಲ್ಲಾಧಿಕಾರಿಗಳಿಂದ ಪಡೆದ ಅಂಕಿಅಂಶಗಳ ಆಧಾರದಲ್ಲಿ ಕಳೆದ ಎರಡು ದಿನಗಳಲ್ಲಿ ಮಳೆಸಂಬಂಧಿ ಅನಾಹುತಗಳಿಗೆ ಬಲಿಯಾದವರ ಸಂಖ್ಯೆ 40ನ್ನು ದಾಟಿದೆ.
ನೈನಿತಾಲ್ ಜಿಲ್ಲೆಯಲ್ಲಿ 18 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಸಾವಿನ ಸಂಖ್ಯೆ 27ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ನೈನಿತಾಲ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶೋಕ್ ಜೋಶಿ ಹೇಳಿದ್ದಾರೆ. ಹಲವು ಕಡೆಗಳಲ್ಲಿ ಜನ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಪ್ರತಿಕೂಲ ಹವಾಮಾನ ಸ್ಥಿತಿಯಲ್ಲಿ ಪರಿಹಾರ ಕಾರ್ಯಾಚರಣೆ ಕೂಡಾ ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ.
ನೈನಿತಾಲ್ ಜಿಲ್ಲೆಯ ಕಥಗೊದಾಮ್ ರೈಲುನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರೈಲ್ವೆ ಹಳಿ ಗವೂಲಾ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಈ ಮಾರ್ಗದ 12 ರೈಲುಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ನೂರಾರು ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ಹಲವು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಕೂಡಾ ಭೂಕುಸಿತದಿಂದಾಗಿ ಮುಚ್ಚಲ್ಪಟ್ಟಿವೆ.
ಪ್ರಸಿದ್ಧ ಗಿರಿಧಾಮವಾಗಿರುವ ನೈನಿತಾಲ್ ಜಿಲ್ಲೆ ಅಕ್ಷರಃ ಪ್ರವಾಹಪೀಡಿತ ದ್ವೀಪವಾಗಿ ಮಾರ್ಪಟ್ಟಿದೆ. ಸತತ ಎರಡನೇ ದಿನ ಕೂಡಾ ಜಿಲ್ಲೆ, ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಂಡಿದೆ. ಗವೂಲಾ ನದಿಯ ನೀರಿನ ಮಟ್ಟ ಇಳಿಕೆಯಾಗುವ ವರೆಗೆ ಯಾವುದೇ ದುರಸ್ತಿ ಕಾರ್ಯ ಅಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ಟೋಬರ್ 20ರವರೆಗೆ ಎಲ್ಲ ರೈಲುಗಳ ಸಂಚಾರ ನಿಷೇಧಿಸಲಾಗಿದೆ. ಸಿಲುಕಿಕೊಂಡಿರುವ ಪ್ರವಾಸಿಗಳಿಗೆ ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ನೀಡುವಂತೆ ಎಲ್ಲ ಹೊಟೆಲ್ ಮಾಲಕರಿಗೆ ಸೂಚಿಸಲಾಗಿದೆ ಎಂದು ನೈನಿತಾಲ್ ಉಪವಿಭಾಗಾಧಿಕಾರಿ ಪ್ರತೀಕ್ ಜೈನ್ ಹೇಳಿದ್ದಾರೆ.