ಆಗ್ರಾಕ್ಕೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿಯನ್ನು ತಡೆದ ಉತ್ತರಪ್ರದೇಶ ಪೊಲೀಸರು
ನಾನು ಎಲ್ಲಿಗೆ ಹೋದರೂ ... ಅನುಮತಿ ಕೇಳಬೇಕೇ? ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕಿ

ಹೊಸದಿಲ್ಲಿ,ಅ.20: ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಿಕರನ್ನು ಭೇಟಿಯಾಲು ಬುಧವಾರ ಆಗ್ರಾಕ್ಕೆ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರಪ್ರದೇಶದ ಪೊಲೀಸರು ವಶಕ್ಕೆ ತೆಗೆದುಕೊಂಡ ಕೆಲವೇ ತಾಸುಗಳ ಬಳಿಕ ಅವರನ್ನು ಬಿಡುಗಡೆಗೊಳಿಸಿದ್ದಾರೆ ಹಾಗೂ ಮೃತನ ಕುಟುಂಬಿಕರನ್ನು ಭೇಟಿಯಾಗಲು ಅನುಮತಿ ನೀಡಿದ್ದಾರೆ.
ಲಕ್ನೋ-ಅಗ್ರಾ ಎಕ್ಸ್ಪ್ರೆಸ್ವೇಯಲ್ಲಿ ಟೋಲ್ ಪ್ಲಾಝಾದ ಬಳಿ ಪೊಲೀಸರು ಪ್ರಿಯಾಂಕಾರಿದ್ದ ಕಾರನ್ನು ತಡೆದು ನಿಲ್ಲಿಸಿದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಲಕ್ನೋದ ಪೊಲೀಸ್ ಲೈನ್ನಲ್ಲಿರುವ ವಸತಿಗೃಹಕ್ಕೆ ಅವರನ್ನು ಕೊಂಡೊಯ್ಯಲಾಗಿದೆ. ಮೂಲಗಳು ತಿಳಿಸಿವೆ. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಪ್ರಿಯಾಂಕಾ ಅವರ ಬಂಧನವಾಗಿರುವುದು ಇದು ಎರಡನೆ ಸಲವಾಗಿದೆ. ಕಸ್ಟಡಿಯಲ್ಲಿ ಸಾವನ್ನಪ್ಪಿದ ಅರುಣ್ ವಾಲ್ಮೀಕಿಯ ಕುಟುಂಬಿಕರನ್ನು ಭೇಟಿಯಾಗಲು ಪ್ರಿಯಾಂಕಾ ಆಗ್ರಾಕ್ತಕೆ ತೆರಳುತ್ತಿದ್ದರು.
ಪೊಲೀಸರು ತನ್ನನ್ನು ಬಂಧಿಸುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಪ್ರಿಯಾಂಕಾ‘‘ಒಂದು ವೇಳೆ ನಾನು ಮನೆ ಅಥವಾ ಕಚೇರಿಗೆ ಹೋದರೆ ಅವರಿಗೆ ಪರವಾಗಿಲ್ಲ. ಆದರೆ ನಾನು ಎಲ್ಲಿಗಾದರೂ ಹೋಗುವುದಾದರೆ ಅವರು ಈ ಪ್ರಹಸನವನ್ನು ಶುರುಹಚ್ಚಿಬಿಡುತ್ತಾರೆ. ನಾನು ಕುಟುಂಬವೊಂದನ್ನು ಭೇಟಿಯಾಗಲು ಹೋಗುತ್ತಿದ್ದ ನನ್ನನ್ನು ಬಂಧಿಸಿರುವ ಉ.ಪ್ರ . ಪೊಲೀಸರ ಕ್ರಮ ಅಸಂಬದ್ಧವಾದುದು. ಎಂದರು.
ದೇಶದಲ್ಲಿ ಮುಕ್ತವಾಗಿ ಸಂಚರಿಸಲು ತನಗೆ ಸಂವಿಧಾನಾತ್ಮಕವಾದ ಹಕ್ಕಿದೆಯೆಂದು ಪ್ರಿಯಾಂಕಾ ಪ್ರತಿಪಾದಿಸಿದರು. ತಾನು ಬಿಡುಗಡೆಯಾದ ಕೂಡಲೇ ಮೃತನ ಕುಟುಂಬವನ್ನು ಭೇಟಿಯಾಗಲು ದೃಢನಿರ್ಧಾರ ಮಾಡಿರುವುದಾಗಿಯೂ ಪ್ರಿಯಾಂಕಾ ತಿಳಿಸಿದರು.
ಈ ತಿಂಗಳ ಆರಂಭದಲ್ಲಿ ಲಖೀಂಪುರ ಘಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳನ್ನು ಭೇಟಿಯಾಗಲು ಹೊರಟಿದ್ದ ಪ್ರಿಯಾಂಕಾ ವಾದ್ರಾ ಅವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಪ್ರಿಯಾಂಕಾ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಉತ್ತರಪ್ರದೇಶ ಸರಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಉತ್ತರಪ್ರದೇಶ ಪೊಲೀಸರ ಚಿತ್ರಹಿಂಸೆಯಿಂದಾಗಿ ಅರುಣ್ ವಾಲ್ಮೀಕಿ ಸಾವನ್ನಪ್ಪಿರುವುದಾಗಿ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ಆಪಾದಿಸಿದ್ದವು.
ಅರುಣ್ ವಾಲ್ಮೀಕಿ ಕುಟುಂಬವನ್ನು ಭೇಟಿಯಾಗದಂತೆ ತನ್ನನ್ನು ಪೊಲೀಸರು ತಡೆದ ಬೆನ್ನಲ್ಲೇ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಅವರು ಉತ್ತರಪ್ರದೇಶ ಸರಕಾರ ಹೆದರುವುದೇತಕ್ಕೆ ಎಂದು ಕಟಕಿಯಾಡಿದ್ದಾರೆ.
‘‘ಅರುಣ್ ಗಾಂಧಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಕುಟುಂಬವು ನ್ಯಾಯಕ್ಕಾಗಿ ಹೋರಾಡುತ್ತಿದೆ. ನಾನು ಆ ಕುಟುಂಬವನ್ನು ಭೇಟಿಯಾಗ ಬಯಸಿದ್ದೆ. ನಾನು ಯಾಕೆ ತಡೆಯಲಾಗಿದೆ. ಯಾಕೆ ಉತ್ತರಪ್ರದೇಶ ಸರಕಾರವು ಹೆದರುತ್ತಿದೆ. ಪ್ರಧಾನಿ ಮೋದಿಯವರು ಬುದ್ಧನ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿರುತ್ತಾರೆ. ಆದರೆ ಆತನ ಸಂದೇಶದ ಮೇಲೆ ಅವರು ದಾಳಿ ನಡೆಸುತ್ತಿದ್ದಾರೆ’’ ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮೃತ ಯುವಕನ ಕುಟುಂಬವನ್ನು ಭೇಟಿಯಾಗಲು ಪ್ರಿಯಾಂಕಾ ಅವರು ಪೂರ್ವಾನುಮತಿಯನ್ನು ಪಡೆದಿರಲಿಲ್ಲವೆಂದು ಉತ್ತರಪ್ರದೇಶ ಪೊಲೀಸರು ಕಾಂಗ್ರೆಸ್ ನಾಯಕಿಯ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ.
ಪೊಲೀಸ್ ಠಾಣೆಗೆ ಸೇರಿದ ಪುರಾವೆಗಳ ಲಾಕರ್ ಇರುವ ಕಟ್ಟಡದಲ್ಲಿ ಇರಿಸಲಾಗಿದ್ದ 25 ಲಕ್ಷ ರೂ.ಗಳನ್ನು ಕಳವು ಮಾಡಿದ ಆರೋಪದಲ್ಲಿ ಅಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ವಾಲ್ಮೀಕಿಯನ್ನು ಶನಿವಾರ ಬಂಧಿಸಲಾಗಿತ್ತು. ಆನಂತರ ಕಸ್ಟಡಿಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ







