ಬಿಜೆಪಿ ನಾಯಕರ ಟೀಕೆಯ ನಂತರ ಹೊಸ ಜಾಹೀರಾತನ್ನು ವಾಪಸ್ ಪಡೆದ ಫ್ಯಾಬ್‍ಇಂಡಿಯಾ

ಹೊಸದಿಲ್ಲಿ: ಭಾರತದ ಖ್ಯಾತ ಜವುಳಿ ಬ್ರ್ಯಾಂಡ್ ಆಗಿರುವ ಫ್ಯಾಬ್‍ಇಂಡಿಯಾ ತನ್ನ 'ಜಶ್ನ್-ಇ-ರಿವಾಝ್' ಎಂಬ ಹೊಸ ಸಂಗ್ರಹ ಕುರಿತಾದ ಜಾಹೀರಾತನ್ನು ಹಲವು ಬಿಜೆಪಿ ನಾಯಕರ ಟೀಕೆಗಳ ಹಿನ್ನೆಲೆಯಲ್ಲಿ ವಾಪಸ್ ಪಡೆದಿದೆ. ಜಶ್ನ್-ಇ-ರಿವಾಝ್ ಎಂಬ ಉರ್ದು ಪದವನ್ನು ಹಿಂದುಗಳ ಹಬ್ಬ ದೀಪಾವಳಿ ಜತೆ ಥಳಕು ಹಾಕಿ ದೀಪಾವಳಿ ಹಬ್ಬಕ್ಕೆ ಚ್ಯುತಿ ತರಲು ಯತ್ನಿಸಿದೆ ಎಂದು ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಜಶ್ನ್-ಇ-ರಿವಾಝ್ ಎಂದರೆ ಸಂಪ್ರದಾಯ/ಹಬ್ಬಗಳ ಆಚರಣೆಯಾಗಿದೆ.
ಇದೀಗ ಡಿಲೀಟ್ ಆಗಿರುವ ಫ್ಯಾಬ್‍ಇಂಡಿಯಾದ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಹೀಗೆ ಬರೆಯಲಾಗಿತ್ತು. "ನಾವು ಪ್ರೀತಿ ಮತ್ತು ಬೆಳಕಿನ ಹಬ್ಬವನ್ನು ಸ್ವಾಗತಿಸುವ ಸಮಯದಲ್ಲಿ, ಫ್ಯಾಬ್ ಇಂಡಿಯಾದಿಂದ ಜಶ್ನ್-ಇ-ರಿವಾಝ್ ಸಂಗ್ರಹವು ಭಾರತೀಯ ಸಂಸ್ಕೃತಿಗೆ ಒಂದು ಸುಂದರ ಗೌರವ" ಎಂದು ಬರೆಯಲಾಗಿತ್ತು.
ವ್ಯಾಪಕ ಟೀಕೆಗಳ ನಂತರ ಜಾಹೀರಾತನ್ನು ವಾಪಸ್ ಪಡೆದಿರುವ ಫ್ಯಾಬ್‍ಇಂಡಿಯಾ ತನ್ನ ಈ ಹೊಸ ಸಂಗ್ರಹ ದೀಪಾವಳಿ ಬಟ್ಟೆಗಳ ಸಂಗ್ರಹವಲ್ಲ, ಬದಲು ದೀಪಾವಳಿಗಾಗಿ ʼಝಿಲ್ ಮಿಲ್ ಸೆ ದಿವಾಲಿʼ ಸಂಗ್ರಹ ಇನ್ನಷ್ಟೇ ಬಿಡುಗಡೆಗೊಳ್ಳಬೇಕು ಎಂದು ಹೇಳಿದೆ.
ಫ್ಯಾಬ್‍ಇಂಡಿಯಾದ ಜಾಹೀರಾತಿನ ವಿರುದ್ಧ ಕಿಡಿಕಾರಿದ ಬಿಜೆಪಿ ನಾಯಕರುಗಳ ಪೈಕಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಕೂಡ ಸೇರಿದ್ದಾರೆ. "ಹಿಂದು ಹಬ್ಬಗಳ ಅಬ್ರಹಾಮೀಕರಣ" ಎಂಬರ್ಥದ ಟ್ವೀಟನ್ನೂ ಅವರು ಮಾಡಿದ್ದಾರಲ್ಲದೆ ದೀಪಾವಳಿ ಹಬ್ಬ ಜಶ್ನ್ ಇ ರಿವಾಝ್ ಅಲ್ಲ ಎಂದಿದ್ದಾರೆ. ಜಾಹೀರಾತಿನ ರೂಪದರ್ಶಿಗಳು ಸಾಂಪ್ರದಾಯಿಕ ಹಿಂದು ಧಿರಿಸನ್ನು ಧರಿಸಿರಲಿಲ್ಲ ಎಂದೂ ತೇಜಸ್ವಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟ್ವೀಟ್ ಮಾಡಿ "ಫ್ಯಾಬ್‍ಇಂಡಿಯಾ ಅಷ್ಟೊಂದು ಜಾತ್ಯತೀತವಾಗಿದ್ದರೆ, ಅವರಿಗೆ ಸೇವೆ ಸಲ್ಲಿಸಲಿ, ನಾವು ಬೇರೆ ಮಳಿಗೆಯನ್ನು ನೋಡುತ್ತೇವೆ" ಎಂದು ಬರೆದಿದ್ದಾರೆ. ಐಟಿ ಕ್ಷೇತ್ರದ ಟಿ ವಿ ಮೋಹನದಾಸ್ ಪೈ ಅವರು ತೇಜಸ್ವಿ ಸೂರ್ಯ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ಫ್ಯಾಬ್‍ಇಂಡಿಯಾ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದೆ ಎಂದಿದ್ದಾರೆ.
ಇನ್ನೊಬ್ಬ ಬಿಜೆಪಿ ನಾಯಕ ಕಪಿಲ್ ಮಿಶ್ರಾ ತಮ್ಮ ಟ್ವೀಟ್‍ನಲ್ಲಿ "ಫ್ಯಾಬ್‍ಇಂಡಿಯಾ ಬಹಿಷ್ಕರಿಸಲು ಸಮಯ ಬಂದಿದೆ. ಅವರಿಗೆ ನಮ್ಮ ಹಣ ಪಡೆಯುವ ಅರ್ಹತೆಯಿಲ್ಲ" ಎಂದಿದ್ದಾರೆ.
ಈ ನಡುವೆ ಹಲವಾರು ಮಂದಿ ಈ ಒಂದು ಭಾರತೀಯ ಸಂಸ್ಕೃತಿಯ ಪದವನ್ನು ಬಳಸಿಕೊಂಡು ಕೋಮುವಾದೀಕರಣ ಮಾಡುತ್ತಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಶಾʼ ಎನ್ನುವುದು ಪರ್ಷಿಯನ್ ಮತ್ತು ಉರ್ದು ಪದವಾಗಿದೆ. ಹಾಗಾದರೆ ಅಮಿತ್ ʼಶಾʼʼರನ್ನು ಬಹಿಷ್ಕರಿಸುತ್ತೀರೇ? ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ.