ಅಮರಿಂದರ್ ಸಿಂಗ್ ಜೊತೆ ಮೈತ್ರಿಗೆ ಸಿದ್ಧ: ಬಿಜೆಪಿ
ಹೊಸದಿಲ್ಲಿ, ಅ.20: ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೊಸ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿರುವ ಬೆನ್ನಲ್ಲೇ, ದೇಶ ಮೊದಲು ಎಂಬ ಧ್ಯೇಯಕ್ಕೆ ಬದ್ಧರಾದ ಎಲ್ಲರ ಜತೆಯೂ ಮೈತ್ರಿ ರಚಿಸಿಕೊಳ್ಳಲು ತಾನು ಸಿದ್ಧ ಎಂದು ಬಿಜೆಪಿ ಬುಧವಾರ ಘೋಷಿಸಿದೆ.
ರೈತರ ಸಮಸ್ಯೆ ಪರಿಹಾರವಾದರೆ ತನ್ನ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಬಹುದು ಎಂದು ಅಮರೀಂದರ್ ಸಿಂಗ್ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ. ಅಮರೀಂದರ್ ಓರ್ವ ದೇಶಭಕ್ತನಾಗಿದ್ದು ಬಿಜೆಪಿಯು ದೇಶ ಮೊದಲು ಎಂಬ ಧ್ಯೇಯ ಹೊಂದಿರುವ ಜನರೊಂದಿಗೆ ಸಂಬಂಧ ಬೆಳೆಸಲು ಮುಕ್ತವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ಉಸ್ತುವಾರಿ ದುಷ್ಯಂತ್ ಗೌತಮ್ ಹೇಳಿದ್ದಾರೆ.
ಆದರೆ ಅಮರೀಂದರ್ ಸಿಂಗ್ ರೈತರ ಸಮಸ್ಯೆ ಪರಿಹಾರವಾಗಬೇಕು ಎಂದಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗೌತಮ್ ‘ಸಿಂಗ್ ರೈತರ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ, ರೈತರ ಪ್ರತಿಭಟನೆ ಕೊನೆಗೊಳ್ಳಬೇಕೆಂದು ಹೇಳಿಲ್ಲ. ಇದಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ನಾವು ರೈತರ ಹಿತಚಿಂತನೆಯ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದೇವೆ. ನಾವಿಬ್ಬರೂ ಜತೆಯಲ್ಲೇ ಕುಳಿತು ರೈತರ ಸಮಸ್ಯೆಯ ಬಗ್ಗೆ ಚರ್ಚಿಸುತ್ತೇವೆ’ ಎಂದರು.
ಅಮರೀಂದರ್ ಸಿಂಗ್ ಈ ಹಿಂದೆ ಯೋಧರಾಗಿದ್ದವರು. ದೇಶದ ಭದ್ರತೆಯ ವಿಷಯದಲ್ಲಿ ಅವರ ನಿಲುವು ಶ್ಲಾಘನೀಯವಾಗಿದೆ. ಆದರೂ ಇದುವರೆಗೆ ಯಾವುದೂ ಅಂತಿಮವಾಗಿಲ್ಲ. ಅಮರೀಂದರ್ ತನ್ನ ಪಕ್ಷದ ಬಗ್ಗೆ ಘೋಷಿಸಿ, ತಮ್ಮ ಆಶಯಗಳ ಬಗ್ಗೆ ಮಾಹಿತಿ ನೀಡಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ ಎಂದವರು ಹೇಳಿದ್ದಾರೆ. ಅಮರೀಂದರ್ ಸಿಂಗ್ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.