ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಒತ್ತು ನೀಡುವುದು ಅಗತ್ಯ: ವೈಲೆಟ್ ಫೆಮೀನಾ

ಉಡುಪಿ, ಅ.20: ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಕಾಪಾಡುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅವಶ್ಯಕತೆ ಇಂದು ಹೆಚ್ಚಿದೆ ಎಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಉಪನಿರೀಕ್ಷಕಿ ವೈಲೆಟ್ಫೆಮಿನಾ ಹೇಳಿದ್ದಾರೆ.
ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ನೇತೃತ್ವದಲ್ಲಿ ದಿ.ತೆರೆಜಾ ಕರ್ನೆಲಿಯೋ ಕೆಮ್ಮಣ್ಣು ಹಾಗೂ ಇತರ ದಾನಿಗಳ ಪ್ರಾಯೋಜಕತ್ವದಲ್ಲಿ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಬುಧವಾರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡುತಿದ್ದರು.
ಇಂದು ಸಮಾಜದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿರುವುದು ಕಳವಳಕಾರಿ ಯಾಗಿದೆ. ವಿದ್ಯಾರ್ಥಿಗಳು ದೌಜ್ಯರ್ನಗಳು ನಡೆದಾಗ ಅದನ್ನು ಎದುರಿಸುವ ಎದೆಗಾರಿಕೆ ತೋರಬೇಕು. ಪ್ರತಿ ಬಾರಿ ದೌರ್ಜನ್ಯಗಳಾದಾಗ ಸಹಿಸುತ್ತ ಹೋಗುವುದನ್ನು ಬಿಟ್ಟು ಅದನ್ನು ಧೈರ್ಯದಿಂದ ಎದುರಿಸಿ ಗೆಲ್ಲೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಸುಮಾರು 51 ಮಂದಿ ವಿದ್ಯಾರ್ಥಿಗಳಿಗೆ ಒಟ್ಟು 3 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೇರಿ ಡಿಸೋಜ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಡಾ.ಜೆರಾಲ್ಡ್ ಪಿಂಟೊ, ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ಪಿಂಟೊ, ಆಲ್ಫೋನ್ಸ್ ಡಿಕೋಸ್ತ, ಎಲ್ರೋಯ್ ಕಿರಣ್ ಕ್ರಾಸ್ಟೊ, ಆಲ್ವಿನ್ ಕ್ವಾಡ್ರಸ್, ಪದಾಧಿಕಾರಿಗಳಾದ ಫೆಲಿಕ್ಸ್ ಪಿಂಟೊ ಉಪಸ್ಥಿತರಿದ್ದರು.
ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ವಂದಿಸಿದರು. ಸಹ ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ಕಾರ್ಯಕ್ರಮ ನಿರೂಪಿಸಿದರು.







