ಅ.24ರಂದು ‘ಅಮ್ಚೆ ಸಂಸಾರ್’ ಆರ್‌ಎಸ್‌ಬಿ ಕೊಂಕಣಿ ಸಿನೆಮಾದ ಪ್ರೀಮಿಯರ್ ಶೋ
ಉಡುಪಿ, ಅ. 20: ಅಮ್ಚೆ ಕ್ರಿಯೇಶನ್ಸ್ ಅರ್ಪಿಸುವ ಆರ್‌ಎಸ್‌ಬಿ ಕೊಂಕಣಿ ಭಾಷೆಯ ಚೊಚ್ಚಲ ಚಲನಚಿತ್ರ ‘ಅಮ್ಚೆ ಸಂಸಾರ್’ ಇದರ ಪ್ರೀಮಿಯರ್ ಪ್ರದರ್ಶನ ಅ.24ರಂದು ಅಪರಾಹ್ನ 3ಗಂಟೆಗೆ ಮಣಿಪಾಲದ ಕೆನರಾ ಮಾಲ್‌ನ ಭಾರತ್ ಸಿನೆಮಾದಲ್ಲಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನೆಮಾದ ಸಿನೆಮಾಟೋಗ್ರಾಫರ್ ಭುವನೇಶ್ ಪ್ರಭು ಹಿರೇಬೆಟ್ಟು, ಪ್ರದರ್ಶನವನ್ನು ಚಲನ ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಹಿಸಲಿರುವರು ಎಂದರು.
ಸಮುದಾಯದ ಹಿರಿಯರ ಜನಜೀವನವನ್ನು ಆಧರಿಸಿ ತಯಾರಿಸಲಾದ ಈ ಸಿನೆಮಾ 2ಗಂಟೆ 10ನಿಮಿಷದ ಅವಧಿ ಆಗಿದ್ದು, ಅಂದಾಜು 25-30ಲಕ್ಷ ರೂ. ವ್ಯಯಿಸಲಾಗಿದೆ. ಚಿತ್ರ ಚಿತ್ರೀಕರಣವನ್ನು ಕುಂದಾಪುರ, ಕಾರ್ಕಳ, ಉಡುಪಿ ಪರಿಸರದಲ್ಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸದ್ಯ ಭಾರತ್ ಸಿನೆಮಾದಲ್ಲಿ ಅಪರಾಹ್ನ 3.30 ಮತ್ತು 6.30ಕ್ಕೆ ಈ ಚಿತ್ರದ ಪ್ರದರ್ಶನ ನಡೆಯಲಿದೆ. ಮುಂದಿನ ತಿಂಗಳಲ್ಲಿ ಮಂಗಳೂರಿನಲ್ಲಿ ಪ್ರದರ್ಶನ ಗೊಳ್ಳಲಿದೆ. ಅದೇ ರೀತಿ ಈ ಚಿತ್ರವನ್ನು ಆರ್‌ಎಸ್‌ಬಿ ಭಾಷಿಕರು ಅಧಿಕ ಸಂಖ್ಯೆ ಯಲ್ಲಿರುವ ಮುಂಬೈ, ಗೋವಾ, ಬೆಳಗಾಂ, ಬೆಂಗಳೂರು, ಸುಳ್ಯ, ಪುತ್ತೂರು, ಮೈಸೂರು, ಪುಣೆ ಮೊದಲಾದ ಕಡೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು, ನಾಯಕ ನಟ ರೋಹನ್ ನಾಯಕ್, ನಟ ಪಾಂಡುರಂಗ ಪ್ರಭು, ಪ್ರವೀಣ್ ಪ್ರಭು, ಪುಂಡಲೀಕ ಮರಾಠೆ ಉಪಸ್ಥಿತರಿದ್ದರು.







