ನಂದಳಿಕೆಯ ಗೋಳಿಕಟ್ಟೆಯಲ್ಲಿ ಆಧುನಿಕ ಶಾಸನ ಪತ್ತೆ

ಉಡುಪಿ, ಅ.20: ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ 20ನೇ ಶತಮಾನದ ಆದಿಭಾಗದ ಶಾಸನ ವೊಂದನ್ನು ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪುರಾತತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಕಾರ್ತಿಕ್, ಗೌತಮ್, ಶ್ರೇಯಸ್ ಪತ್ತೆ ಹಚ್ಚಿದ್ದಾರೆ ಎಂದು ಪುರಾತತ್ವ ವಿಭಾಗದ ಮುಖ್ಯಸ್ಥರಾದ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.
ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನ, 8 ಸಾಲಿನಲ್ಲಿ ಬರೆಯಲ್ಪಟ್ಟಿದೆ. ದೀರ್ಘ ಲಿಂಗಾಕೃತಿಯ ಕಲ್ಲಿನ ಒಂದು ಪಾರ್ಶ್ವದ ಮೇಲೆ, ವೃತ್ತಾಕಾರದ ಸೂರ್ಯ, ಅದರ ಕೆಳಭಾಗದಲ್ಲಿ ಅರ್ಧ ಚಂದ್ರಾಕೃತಿಯನ್ನು ಕೊರೆಯಲಾಗಿದೆ. ಈ ಚಿತ್ರಗಳ ಕೆಳಭಾಗದಲ್ಲಿ ದೊಡ್ಡ ದೊಡ್ಡ ಅಕ್ಷರಗಳ ಬರವಣಿಗೆ ಇದೆ. ಈ ಕಲ್ಲು ಸುಮಾರು 167 ಸೆ.ಮಿ. ಉದ್ದವಿದೆ.
1905 ರಲ್ಲಿ ಮರಣ ಹೊಂದಿದ ಬೆಣಿಯ ಅಂಕಯ್ಯ ಶೆಟ್ರ, ಮರಣ ದಾಖಲೆ ಇದಾಗಿದೆ. ನಂದಳಿಕೆ ಗ್ರಾಮದ ಗೋಳಿಕಟ್ಟೆಯಲ್ಲಿ ಬೆಣಿಯ ಮನೆತನದ ಮನೆಯಿದೆ. ಸುಮಾರು 116 ವರ್ಷಗಳ ಹಿಂದೆ ಮರಣ ಹೊಂದಿದ ಬೆಣಿಯ ಅಂಕಯ್ಯ ಶೆಟ್ಟಿ ಆ ಕಾಲದ ಪ್ರಸಿದ್ಧ ವ್ಯಕ್ತಿಯಾಗಿದ್ದಿರಬೇಕು. ಆ ವ್ಯಕ್ತಿಯ ಮರಣಾ ನಂತರ ಅವರ ಅಂತ್ಯಸಂಸ್ಕಾರದ ಜಾಗದಲ್ಲಿ ಈ ವಿಶಿಷ್ಟವಾದ ಕಲ್ಲನ್ನು ನಿಲ್ಲಿಸಲಾಗಿದೆ.
20ನೇ ಶತಮಾನದ ಆದಿಭಾಗದಲ್ಲೂ ಶಾಸನಗಳನ್ನು ಬರೆಸುವ ಪದ್ಧತಿ ಕರಾವಳಿಯಲ್ಲಿ ಜೀವಂತವಾಗಿತ್ತೆನ್ನುವುದಕ್ಕೆ ಈ ಶಾಸನ ಉತ್ತಮ ಉದಾಹರಣೆ ಯಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.







