ಶ್ರೀವಿಶ್ವೇಶತೀರ್ಥರ ಸ್ಮಾರಕ ವಿದ್ಯಾರ್ಥಿ ನಿಲಯಕ್ಕೆ 4.5 ಕೋಟಿ ರೂ.ಮಂಜೂರು
ಉಡುಪಿ, ಅ.20: ಪೇಜಾವರ ಮಠದ ಯತಿಗಳಾಗಿದ್ದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳ ಸ್ಮರಣಾರ್ಥ ಅವರ 90 ನೇ ಜನ್ಮವರ್ಧಂತಿ ಪ್ರಯುಕ್ತ ಹಿಂದುಳಿದ ವರ್ಗಗಳ ಉಚಿತ ವಿದ್ಯಾರ್ಥಿನಿ ನಿಲಯ ನಿರ್ಮಾಣಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 4.50 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ.
ಶ್ರೀವಿಶ್ವೇಶತೀರ್ಥರ ಹೆಸರಿನಲ್ಲಿ ಈ ವಿದ್ಯಾರ್ಥಿ ನಿಲಯ ಉಡುಪಿಯಲ್ಲಿ ನಿರ್ಮಾಣಗೊಳ್ಳಲಿದೆ. ಅದೇ ರೀತಿ ಹೆಬ್ರಿಯ ಅಮೃತ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಹಿಂದುಳಿದ ವರ್ಗಗಳ ಬಾಲಕ ಮತ್ತು ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ಮೂರು ಕೋಟಿ ರೂ. ಹಾಗೂ ಕುಂದಾಪುರ ತಾಲೂಕು ತಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಉಪ್ಪಿನಕುದ್ರು ರಾಮಕ್ಷತ್ರಿಯ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೂ ಇಲಾಖೆ ಒಂದು ಕೋಟಿ ರೂ. ಮಂಜೂರಾತಿ ನೀಡಿ ಆದೇಶಿಸಿದೆ.
ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ವಿಶೇಷ ಮುತುವರ್ಜಿಯಿಂದ ಈ ಅನುದಾನ ಮಂಜೂರಾಗಿದೆ. ಈಗಾಗಲೇ ಶ್ರೀವಿಶ್ವೇಶತೀರ್ಥರು ಉಡುಪಿ ಕುಕ್ಕಿಕಟ್ಟೆ ಸಮೀಪದ ಮಠದ ಭೂಮಿಯಲ್ಲಿ ಒಂದು ಉಚಿತ ವಿದ್ಯಾರ್ಥಿನಿ ನಿಲಯವನ್ನು ತಮ್ಮ ನಾಲ್ಕನೇ ಪರ್ಯಾಯದ ಅವಧಿಯಲ್ಲಿ (2000-02) ಸ್ಥಾಪಿಸಿದ್ದು, ಅದನ್ನು ಅಂದಿನ ಉಪಪ್ರಧಾನಿ ಲಾಲಕೃಷ್ಣ ಅಡ್ವಾಣಿ ಉದ್ಘಾಟಿಸಿದ್ದರು.
ಇದೀಗ ಶ್ರೀಗಳ 90ನೇ ಜನ್ಮವರ್ಧಂತಿಗೆ ಸಮಾಜಕ್ಕೆ ಉಪಯೋಗವಾಗುವ ಒಂದು ಯೋಜನೆ ಅನುಷ್ಠಾನ ಗೊಳಿಸಬೇಕೆಂದು ಶ್ರೀ ಅವರ ಭಕ್ತರು ಹಾಗೂ ಅಭಿಮಾನಿಗಳ ಆಶಯದಂತೆ ವಿದ್ಯಾರ್ಥಿನಿ ನಿಲಯಕ್ಕೆ ಹೆಚ್ಚುವರಿಯಾಗಿ ಒಂದು ವಿದ್ಯಾರ್ಥಿನಿ ನಿಲಯವನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಿ ಸರಕಾರದ ನೆರವಿಗಾಗಿ ಸಚಿವ ಶ್ರೀನಿವಾಸ ಪೂಜಾರಿ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಇಲಾಖೆ ಈಗ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ 4.5ಕೋಟಿ ರೂ. ಅನುದಾನ ಮಂಜೂರು ಮಾಡಿದೆ.
ಕುಕ್ಕಿಕಟ್ಟೆಯ ಹಾಸ್ಟೆಲ್ ಬಳಿಯೇ 150 ವಿದ್ಯಾರ್ಥಿನಿಯರು ಉಳಿದುಕೊಳ್ಳುವ ಸಾಮರ್ಥ್ಯದ ಈ ನೂತನ ವಿದ್ಯಾರ್ಥಿನಿ ನಿಲಯವನ್ನೂ ನಿರ್ಮಿಸಲು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಉದ್ದೇಶಿಸಿದ್ದು ಸದ್ಯದಲ್ಲೇ ನಿರ್ಮಾಣ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.







