ʼಮೊಂಡುತನʼ ತೋರುತ್ತಿರುವ ಸರಕಾರ ರಸ್ತೆಗಳನ್ನು ನಿರ್ಬಂಧಿಸಿದೆಯೇ ಹೊರತು ರೈತರಲ್ಲ: ಸುಪ್ರೀಂಗೆ ಟಿಕಾಯತ್ ತಿರುಗೇಟು

ಹೊಸದಿಲ್ಲಿ: "ಪ್ರತಿಭಟನೆ ನಡೆಸುವುದು ರೈತರ ಹಕ್ಕು, ಆದರೆ ಅದರ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆಗಳನ್ನು ತಡೆಯುತ್ತಿರುವುದು ಸರಿಯಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಟಿಕಾಯತ್ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು thequint.com ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ಹೇಳಿಕೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನಾ ಸ್ಥಳದಿಂದ ತೆರಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ ವೇಳೆ ಉತ್ತರಿಸಿದ ಟಿಕಾಯತ್, "ರೈತರೆಲ್ಲರೂ ಇಲ್ಲೇ ಇದ್ದಾರೆ. ಯಾರೂ ಇಲ್ಲಿಂದ ತೆರಳುತ್ತಿಲ್ಲ. ಟ್ವಿಟರ್ ಅನ್ನು ಯಾರು ನಿಭಾಯಿಸುತ್ತಿದ್ದಾರೆ, ನಿಭಾಯಿಸುತ್ತಿಲ್ಲ ಎನ್ನುವುದರ ಕುರಿತು ನಮಗೆ ತಿಳಿದಿಲ್ಲ. ಎಂದು ಅವರು ಹೇಳಿದರು.
"ಹನ್ನೊಂದು ತಿಂಗಳ ಹಿಂದೆ ನಾವು ಇಲ್ಲಿಗೆ ಬಂದ ವೇಳೆ, ದಿಲ್ಲಿಗೆ ತೆರಳಲು ಸಿದ್ಧವಾಗಿದ್ದೆವು. ಆದರೆ ನಮ್ಮನ್ನು ತಡೆದು ನಿಲ್ಲಿಸಲಾಯಿತು. ಹಾಗಾಗಿ ನಾವೀಗ ಇಲ್ಲಿ ಕುಳಿತುಕೊಂಡಿದ್ದೇವೆ. ಮೊಂಡುತನ ತೋರುತ್ತಿರುವ ಸರಕಾರವೇ ತಸ್ತೆ ತಡೆ ನಡೆಸುತ್ತಿದೆಯೇ ಹೊರತು ರೈತರಲ್ಲ. ನಾವು ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ. ಹೋರಾಟದಿಂದ ಪರಿಹಾರದವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ" ಎಂದು ಟಿಕಾಯತ್ ಹೇಳಿದ್ದಾರೆ.