ಐಎಎಸ್ ಅಧಿಕಾರಿಗಳಿಗೆ ಅವರ ಆಯ್ಕೆಯ ಕೇಡರ್ ಪಡೆಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಅ.23: ಐಎಎಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವ ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಯ ಕೇಡರ್ ಅನ್ನು ಪಡೆಯುವ ಹಕ್ಕು ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪೊಂದರಲ್ಲಿ ಸ್ಪಷ್ಟಪಡಿಸಿದೆ.
ಹಿಮಾಚಲ ಪ್ರದೇಶ ಕೇಡರ್ ಹಂಚಿಕೆಯಾಗಿರುವ ಐಎಎಸ್ ಅಧಿಕಾರಿ ಎ.ಶೈನಮೋಳ್ ಅವರಿಗೆ ಕೇರಳ ಕೇಡರ್ ಅನ್ನು ಮಂಜೂರು ಮಾಡುವಂತೆ ಕೇಂದ್ರಕ್ಕೆ ಸೂಚಿಸಿದ್ದ ಕೇರಳ ಉಚ್ಚ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠವು ತಳ್ಳಿಹಾಕಿತು.
1995ರ ಪ್ರಕರಣವೊಂದಲ್ಲಿ ಕೇಡರ್ ಹಂಚಿಕೆಯು ಆಯ್ಕೆಯ ವಿಷಯವಲ್ಲ ಎನ್ನುವುದನ್ನು ಮೂವರು ನ್ಯಾಯಮೂರ್ತಿಗಳ ಪೀಠವು ಎತ್ತಿ ಹಿಡಿದಿತ್ತು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಬೆಟ್ಟು ಮಾಡಿತು.
2017,ಫೆ.29ರ ಕೇರಳ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಕೇಂದ್ರದ ಮೇಲ್ಮನವಿಯನ್ನು ಅಂಗೀಕರಿಸಿದ ಪೀಠವು,ಅಖಿಲ ಭಾರತ ಸೇವೆಗೆ ಅಭ್ಯರ್ಥಿಯಾಗಿ ಶೈನಮೋಳ್ ದೇಶದ ಯಾವುದೇ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಒಪ್ಪಿಕೊಂಡಿದ್ದಾರೆ. ಅರ್ಜಿದಾರರು ಒಮ್ಮೆ ಸೇವೆಗೆ ಆಯ್ಕೆಯಾದರೆಂದರೆ ಆ ಬಳಿಕ ತವರು ಕೇಡರ್‌ಗಾಗಿ ತಕರಾರು ಆರಂಭಿಸಿತ್ತಾರೆ ಎಂದು ಹೇಳಿತು.
ತನಗೆ ಹಿಮಾಚಲ ಪ್ರದೇಶ ಕೇಡರ್ ಅನ್ನು ಹಂಚಿಕೆ ಮಾಡುವ ಮುನ್ನ ತನ್ನ ತವರು ರಾಜ್ಯ ಕೇರಳದ ಜೊತೆ ಸಮಾಲೋಚನೆ ನಡೆಸಿರಲಿಲ್ಲ ಎಂಬ ಶೈನಮೋಳ್ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು,ತನ್ನಿಚ್ಛೆಯಂತೆ ಕೇಡರ್ ಹಂಚಿಕೆ ಮಾಡುವ ಅಧಿಕಾರ ರಾಜ್ಯಕ್ಕಿಲ್ಲ. ಆದ್ದರಿಂದ ಕೇರಳ ಉಚ್ಚ ನ್ಯಾಯಾಲಯವು ಹಂಚಿಕೆ ಸುತ್ತೋಲೆಯಲ್ಲಿ ಉಲ್ಲಂಘನೆಯಾಗಿದೆ ಎಂಬ ವಾದವನ್ನು ಪುರಸ್ಕರಿಸಿ ಕೇಡರ್ ಹಂಚಿಕೆಯಲ್ಲಿ ಮಧ್ಯಪ್ರವೇಶ ಮಾಡಬಾರದಿತ್ತು. ಅರ್ಜಿದಾರರಿಗೆ ಹಿಮಾಚಲ ಪ್ರದೇಶ ಕೇಡರ್ ನೀಡಲಾಗಿತ್ತು ಮತ್ತು ಅದಕ್ಕೆ ಹಿಮಾಚಲ ಪ್ರದೇಶ ಸರಕಾರವು ತನ್ನ ಒಪ್ಪಿಗೆಯನ್ನು ನೀಡಿತ್ತು. ವಾಸ್ತವದಲ್ಲಿ ಅರ್ಜಿದಾರರಿಗೆ ಸಂಬಂಧಿಸಿದಂತೆ ಕೇರಳದೊಂದಿಗೆ ಸಮಾಲೋಚನೆ ಅಗತ್ಯವೇ ಇಲ್ಲ. ಹೀಗಾಗಿ ಕೇಡರ್ ನಿಯಮಾವಳಿಗಳಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೇಳಿತು.
ಶೈನಮೋಳ್ ಒಬಿಸಿ ಅಭ್ಯರ್ಥಿಯಾಗಿದ್ದರೂ ಅವರು ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾದ ಸಡಿಲಿಕೆಗಳನ್ನು ಪಡೆಯದೆ ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿ ಪರೀಕ್ಷೆಯನ್ನು ಬರೆದಿದ್ದಾರೆ. ಯಾವುದೇ ಸಡಿಲಿಕೆ ಅಥವಾ ವಿನಾಯಿತಿಯನ್ನು ಪಡೆದುಕೊಂಡಿರದ ಒಬಿಸಿ ಅಭ್ಯರ್ಥಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದೇ ಪರಿಗಣಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.