ಕಾರ್ಕಳ; ಇಬ್ಬರು ನಕ್ಸಲ್ ವಾದಿಗಳ ಸುಳಿವುದಾರರಿಗೆ ತಲಾ 10 ಲಕ್ಷ ರೂ. ಘೋಷಣೆ: ರಾಷ್ಟ್ರೀಯ ತನಿಖಾ ಸಂಸ್ಥೆ

ಕಾರ್ಕಳ: ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಕರಣಗಳ ವಿಚಾರಣೆಯ ಕುರಿತು ವಿಶೇಷ ನ್ಯಾಯಾಲಯವು ಇಬ್ಬರು ನಕ್ಸಲ್ ವಾದಿಗಳ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿ ಅದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕೊಟ್ಯಂತಡ್ಕ ಮನೆಯ ಸುಂದರಿ ಆಲಿಯಾಸ್ ಗೀತಾ ಆಲಿಯಾಸ್ ಸಿಂಧು ಮತ್ತು ರಾಯಚೂರು ಜಿಲ್ಲೆಯ ಅರೋಲಿ ಗ್ರಾಮ ಕುಡುಡಿ ಮುಖ್ಯ ರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕರ್ ಕಾಲನಿಯ ಮಹೇಶ್ ಆಲಿಯಾಸ್ ಜಯಣ್ಣ ಆಲಿಯಾಸ್ ಜಾನ್ ಆಲಿಯಾಸ್ ಮಾರಪ್ಪ ತಲೆ ಮರೆಸಿಕೊಂಡಿರುವ ಆರೋಪಿತರು.
ಪಶ್ಚಿಮಘಟ್ಟದಲ್ಲಿ ತಲೆ ಎತ್ತಿರುವ ನಕ್ಸಲ್ ಚಳುವಳಿಯಲ್ಲಿ ಇವರು ಸಕ್ರಿಯಾರಾಗಿದ್ದರು ಎಂದು ತಿಳಿದುಬಂದಿದೆ. ಕರ್ನಾಟಕ ಪೊಲೀಸರು ಈ ಹಿಂದೆ ಇವರ ಪತ್ತೆಯ ಮಾಹಿತಿದಾರರಿಗೆ ಬಹುಮಾನ ಘೋಷಿಸಿತ್ತು.
ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆಯು ಆರೋಪಿತರ ಪತ್ತೆಗಾಗಿ ಸಾರ್ವಜನಿಕ ತಿಳುವಳಿಕೆಯ ಕರಪತ್ರವನ್ನು ಹೊರತಂದಿದೆ. ಮೇಲೆ ತಿಳಿಸಿರುವ ಇಬ್ಬರ ಸುಳಿವು ನೀಡಿದವರಿಗೆ ತಲಾ ರೂ. 10 ಲಕ್ಷ ಬಹುಮಾನ ಘೋಷಿಸಿದೆ. ನ್ಯಾಶನಲ್ ಇನ್ವೇಷ್ಟೀಗೆಶನ್ ಏಜೆನ್ಸಿ ಹೌಸ್ ನಂಬ್ರ 28/ 443 ಗಿರಿನಗರ ಕಡವಂತರ ಕೊಚ್ಚಿ ಕೇರಳ- 682020, ಮೊಬೈಲ್ 9477715294, ದೂರವಾಣಿ: 0484-2349344 ಸಂಪರ್ಕಿಸಬೇಕೆಂದು ಕೋರಲಾಗಿದೆ. ಸುಳಿಸುವ ನೀಡಿದವರ ಮಾಹಿತಿ ಗೌಪ್ಯವಾಗಿರಿಸಲಾಗುವುದೆಂದು ತಿಳಿಸಲಾಗಿದೆ.
ನಕ್ಸಲ್ ನಿಗ್ರಹದಳಕ್ಕೆ ನೂತನ ಎಸ್.ಪಿ
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ತಲೆದೋರಿರುವ ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸುವಂತೆ ಕಾರ್ಕಳವನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಚರಿಸುತ್ತಿರುವ ನಕ್ಸಲ್ ನಿಗ್ರಹದಳದ ನೂತನ ಎಸ್‍ಪಿಯಾಗಿ ರಾಯಚೂರಿನ ಎಸ್‍ಪಿ ನಿಕಂ ಪ್ರಕಾಶ್ ಅಮೃತ್ ಅವರನ್ನು ನೇಮಕಗೊಳಿಸಿ ಸರಕಾರ ಅದೇಶ ಹೊರಡಿಸಿದೆ.







