ಉಡುಪಿ ಜಿಲ್ಲೆಯಾದ್ಯಂತ ಸಿಡಿಲಿನ ಅಬ್ಬರ; ಹಲವು ಮನೆಗಳಿಗೆ ಹಾನಿ: ಲಕ್ಷಾಂತರ ರೂ. ನಷ್ಟ

ಉಡುಪಿ, ಅ.23: ಉಡುಪಿ ಜಿಲ್ಲೆಯಾದ್ಯಂತ ಅ.22ರಂದು ಸಂಜೆ ಹಾಗೂ ಇಂದು ಬೆಳಗ್ಗೆ ಗುಡುಗು ಸಹಿತ ಮಳೆ ಮುಂದುವರೆ ದಿದ್ದು, ಹಲವು ಮನೆಗಳಿಗೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ- 7.1ಮಿ.ಮೀ., ಬ್ರಹ್ಮಾವರ- 24.7 ಮಿ.ಮೀ., ಕಾಪು-13.7ಮಿ.ಮೀ., ಕುಂದಾಪುರ-2.5ಮಿ.ಮೀ., ಬೈಂದೂರು- 1.3 ಮಿ.ಮೀ., ಕಾರ್ಕಳ-23.6ಮಿ.ಮೀ., ಹೆಬ್ರಿ-27.8ಮಿ.ಮೀ. ಹಾಗೂ ಜಿಲ್ಲೆಯಲ್ಲಿ ಸರಾಸರಿ 13.4ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಅಜೆಕಾರು ಕೈಕಂಬ ಸಮೀಪದ ಕಿನಿಲ ರತ್ನಾವತಿ ನಾಯಕ್ ಎಂಬವರ ಮನೆಗೆ ಇಂದು ಮುಂಜಾನೆ ಸಿಡಿಲು ಬಡಿದು ಮೀಟರ್ ಬಾಕ್ಸ್, ಸ್ವಿಚ್, ಫ್ರಿಜ್, ಟಿವಿ, ಟಾಬ್ ಸೇರಿದಂತೆ ಹಲವು ಉಪಕರಣಗಳು ಸುಟ್ಟು ಹೋಗಿವೆ. ಮನೆಯ ನೂರಕ್ಕೂ ಹೆಚ್ಚು ಹಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಈ ಘಟನೆಯಿಂದ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ.
ಅ.23ರಂದು ಬೆಳಗ್ಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕನಗುಂದಿ ಎಂಬಲ್ಲಿ ಸತೀಶ್ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಗೋಡೆ ಭಾಗಃಶ ಹಾಗೂ ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಹಾನಿಯಾಗಿ ಸುಮಾರು 15 ಸಾವಿರ ರೂ. ನಷ್ಟ ಉಂಟಾಗಿದೆ. ಕಣಜಾರು ಗ್ರಾಮದ ಹರಿಶ್ಚಂದ್ರ ಇವರ ಮನೆಯ ಗೋಡೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿ 20,000ರೂ. ನಷ್ಟ ಸಂಭವಿಸಿದೆ.
ಕುಂದಾಪುರ ತಾಲೂಕಿನಲ್ಲಿ ಹಲವು ಮನೆಗಳಿಗೆ ಸಿಡಿಲು ಬಡಿದ ಪರಿಣಾಮ ಶಂಕನಾರಾಯಣ ಗ್ರಾಮದ ಶೇಷಿ ಪೂಜಾರ್ತಿ ಎಂಬವರಿಗೆ 75,000ರೂ., ಅಂಪಾರು ಗ್ರಾಮದ ಗುಣರತ್ನ ಎಂಬವರಿಗೆ 80,000ರೂ., ಅಂಪಾರು ಗ್ರಾಮದ ಕರುಣಾಕರ ಎಂಬವರಿಗೆ 50,000ರೂ., ಬಾರಂದಾಡಿ ಗ್ರಾಮದ ಪ್ರೇಮ ಅಚಾರಿ ಎಂಬವರಿಗೆ 40,000ರೂ. ನಷ್ಟ ಉಂಟಾಗಿದೆ.
ಹೆಂಗವಳ್ಳಿ ಗ್ರಾಮದ ಹಾಲು ಡೈರಿಗೆ ಸಿಡಿಲು ಬಡಿದು ವಿದ್ಯುತ್ ಉಪಕರಣ ಹಾನಿಯಾಗಿ ಸುಮಾರು 100,000ರೂ. ನಷ್ಟ ಉಂಟಾಗಿದೆ. ಕಾವ್ರಾಡಿ ಗ್ರಾಮದ ಖಲೀಪ್ ಎಂಬವರ ಮನೆ ಮೇಲೆ ಮರಬಿದ್ದು 35,000ರೂ. ಮತ್ತು ಕೊಡ್ಲಾಡಿ ಗ್ರಾಮದ ಅಣ್ಣಯ್ಯ ನಾಯ್ಕ ಎಂಬವರ ಅಡಿಕೆ ತೋಟ ಭಾಗಶಃ ಹಾನಿಯಾಗಿ 25,000ರೂ. ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.









