ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಬದ್ಧ: ಸಚಿವ ಅಶ್ವತ್ಥ ನಾರಾಯಣ

ಬೈಂದೂರು, ಅ.23: ರಾಜ್ಯ ಉನ್ನತ ಶಿಕ್ಷಣ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವತ್ಥ ನಾರಾಯಣ ಸಿ.ಎನ್. ಶನಿವಾರ ಬೈಂದೂರಿನ ಸರಕಾರಿ ಐಟಿಐ ಕಾಲೇಜು ಆವರಣದಲ್ಲಿ ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಐಟಿಐಗಳನ್ನು ಅಂತಾರಾಷ್ಟೀಯ ಮಟ್ಟಕ್ಕೆ ಉನ್ನತಿಕರಿಸುತ್ತಿ ರುವ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಸಚಿವರು, ಗ್ರಾಮೀಣ ಭಾಗದಲ್ಲಿ ವಿಶ್ವ ದರ್ಜೆಯ ಐಟಿಐ ಸಂಸ್ಥೆ ಬೈಂದೂರಿನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಇದು 4.0 ಅನುಗುಣವಾಗಿ ನಿರ್ಮಾಣವಾಗುತ್ತಿದೆ. ಇಲ್ಲಿ ಹೊಸದಾಗಿ 11 ಕೋರ್ಸ್ ಪ್ರಾರಂಭ ಮಾಡುತ್ತಿದ್ದೇವೆ. 6 ಕೋರ್ಸ್‌ಗಳು ಒಂದು ವರ್ಷಗಳ ಕಾಲ, 5 ಕೋರ್ಸ್‌ಗಳು ಎರಡು ವರ್ಷಗಳ ಅವಧಿಯದ್ದಾಗಿದೆ. 23 ಹೊಸ ಪ್ರೊಜೆಕ್ಟ್ ಪ್ರಾರಂಭ ಮಾಡುತ್ತಿದ್ದೇವೆ. ಬಹು ಬೇಡಿಕೆ ಇರುವ ಎಲ್ಲಾ ಕ್ಷೇತ್ರಕ್ಕೆ ಬೇಕಾಗುವ ಕಾರ್ಯಕ್ರಮಗಳನ್ನು ಇಲ್ಲಿ ಆಳವಡಿಸಿಕೊಳ್ಳಲಾಗುವುದು ಎಂದರು.
ಈ ಭಾಗಕ್ಕೆ ಹೊಸ ಉದ್ಯಮಗಳು ಬಂದರೆ, ಇಲ್ಲಿನ ಮಕ್ಕಳಿಗೆ ಉದ್ಯೋಗ ಸಿಗುವಂತಾಗಬೇಕು. ವಿಶ್ವದ ಯಾವುದೇ ಭಾಗದಲ್ಲಿ ಉದ್ಯೋಗ ಪಡೆಯಬೇಕಾದರೂ, ಇಲ್ಲಿ ಅಗತ್ಯವಿರುವ ಸೂಕ್ತವಾದ ತರಬೇತಿಯನ್ನು ನೀಡಿ, ವಿದ್ಯಾರ್ಥಿ ಗಳಿಗೆ ಉತ್ತಮವಾದ ಭವಿಷ್ಯವನ್ನು ರೂಪಿಸಲಾಗುವುದು. ಇಲ್ಲಿ ಉತ್ತಮವಾದ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ಬೈಂದೂರ ಐಟಿಐ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.
ಇಂಜಿನಿಯರ್ ವಿರುದ್ಧ ಸಚಿವರು ಗರಂ!
ಐಟಿಐ ಕಾಲೇಜಿನ ಕಾಮಗಾರಿ ಪರೀವಿಕ್ಷಣೆ ವೇಳೆ, ಕಾಮಗಾರಿ ವಿವರ ಕೇಳಿದಾಗ ಯಾವುದೇ ದಾಖಲೆಯನ್ನು ಹಾಜರುಪಡಿಸದ ಇಂಜಿನಿಯರ್ ವಿರುದ್ಧ ಸಚಿವ ಅಶ್ವತ್ಥ ನಾರಾಯಣ ಗರಂ ಆದ ಘಟನೆ ನಡೆಯಿತು.
ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಮೂಲ ಯೋಜನೆಯ ಪ್ರಕಾರ ಕಾಮಗಾರಿ ಯನ್ನು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಇದು ಮಹತ್ವ ಪೂರ್ಣ ಯೋಜನೆಯಾಗಿರುವುದರಿಂದ ಕಾಮಗಾರಿಯಲ್ಲಿ ಯಾವುದೇ ಲೋಪ ಉಂಟಾ ಗದಂತೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸಚಿವರು ಇಂಜಿನಿಯರ್‌ಗೆ ತಾಕೀತು ಮಾಡಿದರು.








