ನೇಕಾರರ ಉತ್ಪಾದಕ ಕಂಪೆನಿ ಪ್ರಾರಂಭಿಸಲು ಜವಳಿ ಇಲಾಖೆಯಿಂದ ಚರ್ಚೆ

ಉಡುಪಿ, ಅ.23: ನೇಕಾರರ ಉತ್ಪಾದಕ ಕಂಪೆನಿಯೊಂದನ್ನು ರಚಿಸುವ ಕುರಿತು ರಾಜ್ಯ ಕೈಮಗ್ಗ ಇಲಾಖೆ ನೀಡಿರುವ ನಿರ್ದೇಶನದ ಕುರಿತು ಚರ್ಚಿಸಲು ಉಡುಪಿ ಮತ್ತು ಮಂಗಳೂರಿನ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಜಂಟಿಯಾಗಿ ಪೂರ್ವಭಾವಿ ಸಭೆಯೊಂದನ್ನು ಕಿನ್ನಿಗೋಳಿಯಲ್ಲಿ ಆಯೋಜಿಸಿದ್ದರು.
ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ಕೈಮಗ್ಗ ಸಹಕಾರಿ ಸಂಘಗಳ ಆಡಳಿತ ನಿರ್ದೇಶಕರು, ಅಧ್ಯಕ್ಷರು ಹಾಗೂ ನೇಕಾರರ ಏಳಿಗೆಗಾಗಿ ವಿವಿಧ ರೀತಿಯಲ್ಲಿ ಶ್ರಮಿಸುತ್ತಿರುವ ಕಾರ್ಕಳದ ಕದಿಕೆ ಟ್ರಸ್ಟ್ನ ಟ್ರಸ್ಟಿಗಳು ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಕೈಮಗ್ಗ ಸಹಾಯಕ ನಿರ್ದೇಶಕ ಅಶೋಕ್ ಪ್ರಾಸ್ತಾವಿಕ ವಾಗಿ ಮಾತನಾಡಿ, ನೇಕಾರರ ಉತ್ಪಾದಕ ಕಂಪೆನಿ ಯನ್ನು ರಚಿಸಲು ಇಲಾಖೆ ಯಿಂದ ಬಂದಿರುವ ನಿರ್ದೇಶನದ ಕುರಿತು ಸಭೆಗೆ ಮಾಹಿತಿ ನೀಡಿದರು.
ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಮಾತನಾಡಿ, ನಬಾರ್ಡ್ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿ ನಬಾರ್ಡ್ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದರು. ದ.ಕ. ಜಿಲ್ಲಾ ಕೈ ಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್ ಇಲಾಖೆಯ ನೆರವಿನ ಬಗ್ಗೆ ವಿವರಗಳನ್ನು ತಿಳಿಸಿದರು.
ಸಭೆಯಲ್ಲಿ ನೇಕಾರರ ಉತ್ಪಾದಕ ಸಂಸ್ಥೆಯನ್ನು ರಚಿಸಲು ಇರುವ ಸಾಧಕ ಭಾದಕಗಳನ್ನು ಚರ್ಚಿಸಲಾಯಿತು. ವಿವಿಧ ಕೈಮಗ್ಗ ಸಹಕಾರಿ ಸಂಘಗಳ ಪದಾಧಿಕಾರಿಗಳು ಈ ಪರಿವರ್ತನೆಯ ಸಂದರ್ಭದಲ್ಲಿ ಈಗಿನ ಸಹಕಾರಿ ವ್ಯವಸ್ಥೆಯ ಉಳಿವಿನ ಬಗ್ಗೆ ಆತಂಕ ವ್ಯಕ್ತ ಪಡಿಸಿದರು.
ಹೊಸ ನಿರ್ದೇಶನ ಪ್ರಕಾರ ಕನಿಷ್ಠ 150 ಜನ ಉತ್ಪಾದಕರು ಕಡ್ಡಾಯವಾಗಿ ಇರಬೇಕಾದ ನಿಭಂದನೆ ಇಲ್ಲಿನ ಪರಿಸ್ಥಿತಿಗೆ ಹೊಂದುವುದಿಲ್ಲ ಎಂದು ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಇದು ಮೊದಲಿನ ಹಂತದ ಸಭೆ ಯಾಗಿದ್ದು ಇನ್ನೂ ಸರಿಯಾದ ನಿರ್ದೇಶನ ಬಾರದೇ ಆತಂಕಪಡುವ ಅಗತ್ಯವಿಲ್ಲ ಹಾಗೂ ಸಹಕಾರಿ ಸಂಘಗಳಿಗೆ ಇದರಿಂದ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಇಲಾಖೆಯ ಪರವಾಗಿ ನಿರ್ದೇಶಕರು ಭರವಸೆ ನೀಡಿದರು.
ಸಭೆಯಲ್ಲಿ ತಾಳಿಪಾಡಿ, ಪಡುಪಣಂಬೂರು, ಉಡುಪಿ, ಶಿವಳ್ಳಿ ಮತ್ತು ಬ್ರಹ್ಮಾವರ ನೇಕಾರ ಸಂಘಗಳ ಆಡಳಿತ ವರ್ಗದವರು, ಕದಿಕೆ ಟ್ರಸ್ಟ್ ಟ್ರಸ್ಟಿಗಳು ಮತ್ತು ತಾಳಿಪಾಡಿ ಸಂಘದ ನೇಕಾರರು ಭಾಗವಹಿಸಿದ್ದರು.







