ಉಡುಪಿ: ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಮಾಡಿದ ಡಿಡಿಪಿಐ

ಉಡುಪಿ, ಅ.23: ತಿಂಗಳ ನಾಲ್ಕನೇ ಶನಿವಾರ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆ ಪ್ರಗತಿ ಪರಿಶೀಲಿಸಿದ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ, ಶಾಲೆಯಲ್ಲಿ ಮಕ್ಕಳೊಂದಿಗೆ ಕುಳಿತು ಮಧ್ಯಾಹ್ನ ಬಿಸಿಯೂಟದ ರುಚಿಯನ್ನು ಸವಿದರು.
ಇಂದು ತೆಂಕನಿಡಿಯೂರು ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ ಡಿಡಿಪಿಐ, ಮಕ್ಕಳ ಕಲಿಕೆ ಪ್ರಗತಿ ಪರಿಶೀಲಿಸಿದ ಬಳಿಕ ಮಕ್ಕಳೊಂದಿಗೆ ಕುಳಿತು ಬಿಸಿಯೂಟವನ್ನೂ ಮಾಡಿದರು.
ಶಾಲೆಯಲ್ಲಿ ವಿವಿಧ ತರಗತಿಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆಯನ್ನು ಅವಲೋಕಿಸಿದ ನಾಗೂರ, ಉತ್ತಮ ಅಧ್ಯಯನ ಮಾಡುವಂತೆ ಮಕ್ಕಳಿಗೆ ತಿಳುವಳಿಕೆ ನೀಡಿದರು. ಮಕ್ಕಳ ಪಾಲಕರೊಂದಿಗೂ ಅವರು ಸಮಾಲೋಚನೆ ನಡೆಸಿದರು.
ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ಎಲ್ಲಾ ಮಕ್ಕಳನ್ನು ಸೋಮವಾರದಿಂದ ತಪ್ಪದೇ ಶಾಲೆಗೆ ಕಳುಹಿಸುವಂತೆ ಅವರು ಮನವಿ ಮಾಡಿದರು. ಇದಕ್ಕೆ ಹೆತ್ತವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಕೇಳಿಬಂತು.
ತರಗತಿಗಳಿಗೆ ತೆರಳಿ ಮಕ್ಕಳು ಮಾಡಿದ ಗೃಹ ಪಾಠವನ್ನು ಅವಲೋಕಿಸಿದ ಡಿಡಿಪಿಐ, ತರಗತಿಯಲ್ಲಿ ಶಿಕ್ಷಕರ ಬೋಧನೆ ಆಲಿಸಿದರು. ಶಿಕ್ಷಕರು ಶೈಕ್ಷಣಿಕ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವಂತೆ ತಿಳಿಸಿದ ಅವರು, ಶಾಲಾ ಮಕ್ಕಳಿಂದ ಹೆಚ್ಚು ಕಲಿಕಾ ಚಟುವಟಿಕೆಗಳನ್ನು ಮಾಡಿಸಿ ಕಲಿಕಾ ದೃಢೀಕರಣ ಮಾಡುವಂತೆ ಶಿಕ್ಷಕರಿಗೆ ಸೂಚನೆಗಳನ್ನು ನೀಡಿದರು.









