ಉಗ್ರವಾದಕ್ಕೆ ಹಣಕಾಸು ನೆರವು ಆರೋಪ: ನಾಲ್ವರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಹೊಸದಿಲ್ಲಿ: ಉಗ್ರವಾದಕ್ಕೆ ಹಣಕಾಸು ಸಹಾಯ ಒದಗಿಸಿದ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಗುರುವಾರ ಖುಲಾಸೆಗೊಳಿಸಿದ ದಿಲ್ಲಿಯ ನ್ಯಾಯಾಲಯ, 'ಘೀ' ಎಂಬುದು 'ಸ್ಫೋಟಕಗಳಿಗೆ' ಹಾಗೂ 'ಖಿದ್ಮತ್' ಎಂಬುದು 'ಉಗ್ರವಾದಿಗಳ ಸೇವೆ' ಗೆ ಕೋಡ್ ಆಗಿವೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿದೆ.
ಭಾರತದಲ್ಲಿ ಅಶಾಂತಿ ಹರಡಲು ಪಾಕಿಸ್ತಾನಿ ಉಗ್ರ ಸಂಘಟನೆ- ಫಲಾಹ್-ಇ-ಇನ್ಸಾಯಿತ್ ನಿಂದ ಹಣ ಪಡೆದಿದ್ದಾರೆಂಬ ಆರೋಪದ ಮೇಲೆ ಎನ್‍ಐಎ ನಾಲ್ಕು ಮಂದಿ- ಮೊಹಮ್ಮದ್ ಸಲ್ಮಾನ್, ಮೊಹಮ್ಮದ್ ಸಲೀಂ, ಅರಿಫ್ ಗುಲಾಂ ಬಾಶಿರ್ ಧರಂಪುರಿಯ ಮತ್ತು ಮೊಹಮ್ಮದ್ ಹುಸೈನ್ ಮೊಲಾನಿ ಎಂಬವರನ್ನು ಬಂಧಿಸಿತ್ತು. ಮಸೀದಿ ನಿರ್ಮಾಣದ ನೆಪದಲ್ಲಿ ಹಣ ನೀಡಲಾಗಿತ್ತು ಎಂದು ಎನ್‍ಐಎ ಹೇಳಿತ್ತು.
ಬಂಧಿತರಲ್ಲಿ ಒಬ್ಬನಾದ ಸಲ್ಮಾನ್ ಮೊಬೈಲ್‍ನಲ್ಲಿ "ಘೀ ಕಾ ಇಂತಝಾಂ ಹೋ ಗಯಾ, ಬಾಂಬೆ ವಾಲಿ ಪಾರ್ಟಿ ಭೀ ಆಯೇಗಿ. ಉನ್ಕೇ ಹಾಥೋ ಬಿಜ್ವಾ ದೇಂಗೆ" (ತುಪ್ಪದ ವ್ಯವಸ್ಥೆ ಆಗಿದೆ, ಬಾಂಬೆ ಪಾರ್ಟಿ ಬರುತ್ತಿದೆ. ಅವರ ಕೈಯಲ್ಲಿ ಕೊಟ್ಟು ಕಳಿಸುತ್ತೇವೆ) ಹಾಗೂ "ಆಪ್ ಖಿದ್ಮತ್ ಮೆ ತೆ ನಾ ಇಸ್ಲಿಯೇ ಆಪ್ಕೋ ನಹೀ ಪತಾ ಹೈ," (ನೀವು ಸೇವೆಯಲ್ಲಿದ್ದುದರಿಂದ ನಿಮಗೆ ಈ ವಿಷಯ ತಿಳಿದಿಲ್ಲ. )ಎಂಬ ಸಂದೇಶಗಳನ್ನು ಎತ್ತಿ ತೋರಿಸಿದ್ದ ಎನ್‍ಐಎ, 'ಘೀ' ಎಂಬ ಪದ ಸ್ಫೋಟಕಗಳಿಗೆ ಹಾಗೂ ಖಿದ್ಮತ್ ಎಂಬ ಉರ್ದು ಪದ 'ಸೇವೆಯಲ್ಲಿ' ಎಂಬುದಾಗಿರುವುದರಿಂದ ಉಗ್ರ ತರಬೇತಿ ಹೊಂದಿದವರ ಸೇವೆಯಲ್ಲಿ ಎಂಬರ್ಥ ಎಂದು ವಾದಿಸಿತ್ತು.
ಆದರೆ ಇದಕ್ಕೆ ಯಾವುದೇ ಪುರಾವೆಯಿಲ್ಲವೆಂದು ಹೇಳಿದ ನ್ಯಾಯಾಲಯ ನಾಲ್ಕು ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಟ್ಟಿದೆ.







