ಅಸ್ಸಾಂ, ಬಂಗಾಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ: ಹಬ್ಬದ ಬಳಿಕ ಸೋಂಕು ಏರಿಕೆ ಸುಳಿವು

ಸಾಂದರ್ಭಿಕ ಚಿತ್ರ (Photo source: PTI)
ಹೊಸದಿಲ್ಲಿ, ಅ.24: ಬಂಗಾಳ ಸೇರಿದಂತೆ ಕನಿಷ್ಠ ಮೂರು ರಾಜ್ಯಗಳಲ್ಲಿ ಒಂದು ವಾರದ ದುರ್ಗಾಪೂಜೆ/ ದಸರಾ ಆಚರಣೆ ಬಳಿಕ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ, ಕೋವಿಡ್-19 ಸೋಂಕು ನಿಧಾನವಾಗಿ ಹೆಚ್ಚುತ್ತಿದೆ. ಇದು ಹಬ್ಬದ ಬಳಿಕ ಕೋವಿಡ್-19 ಸಾಂಕ್ರಾಮಿಕ ಏರಿಕೆಯ ಸ್ಪಷ್ಟ ಸೂಚನೆಯಾಗಿದೆ.
ಶನಿವಾರ ಬಂಗಾಳದಲ್ಲಿ 974 ಪ್ರಕರಣಗಳು ವರದಿಯಾಗಿದ್ದು, ಇದು ಈ ವರ್ಷದ ಜುಲೈ 10ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ದೈನಿಕ ಪ್ರಕರಣಗಳ ಸಂಖ್ಯೆ 800ಕ್ಕಿಂತ ಅಧಿಕ ಇದೆ. ಪ್ರಕರಣಗಳು ಹೆಚ್ಚುತ್ತಿರುವ ಇತರ ಎರಡು ರಾಜ್ಯಗಳೆಂದರೆ ಅಸ್ಸಾಂ ಮತ್ತು ಹಿಮಾಚಲ ಪ್ರದೇಶ.
ಮಣಿಪುರ ಮತ್ತು ಜಾರ್ಖಂಡ್ ಹೊರತುಪಡಿಸಿ ಭಾರತದಲ್ಲಿ ಶನಿವಾರ 15,918 ಹೊಸ ಪ್ರಕರಣಗಳು ವರದಿಯಾಗಿವೆ. ಈ ಎರಡು ರಾಜ್ಯಗಳ ಅಂಕಿಅಂಶಗಳು ಲಭ್ಯವಾಗಿಲ್ಲ. ಬಂಗಾಳದಲ್ಲಿ ಈ ವಾರ ಪ್ರಕರಣಗಳ ಸಂಖ್ಯೆಯಲ್ಲಿ ಸ್ಪಷ್ಟ ಏರಿಕೆ ಕಂಡುಬಂದಿದೆ. ಕಳೆದ ಏಳು ದಿನಗಳಲ್ಲಿ 5,560 ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 28.4ರಷ್ಟು ಅಧಿಕ. ಹಿಂದಿನ ವಾರ 4,329 ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಕಳೆದ ವಾರ ದುರ್ಗಾಪೂಜೆ ಆಚರಣೆ ಇದ್ದ ಹಿನ್ನೆಲೆಯಲ್ಲಿ ಪ್ರಕರಣ ಹೆಚ್ಚಳವಾಗಿದೆ ಎನ್ನಲಾಗಿದೆ. ಆದಾಗ್ಯೂ ಮೂರು ವಾರ ಹಿಂದಿನ ಅಂಕಿಅಂಶಗಳಿಗೆ ಹೋಲಿಸಿದರೂ ಪ್ರಕರಣಗಳ ಪ್ರಮಾಣ ಶೇಕಡ 10.4ರಷ್ಟು ಹೆಚ್ಚಳವಾಗಿವೆ. ಮೂರು ವಾರ ಹಿಂದೆ 5,038 ಪ್ರಕರಣ ವರದಿಯಾಗಿತ್ತು.
ಅಸ್ಸಾಂನಲ್ಲಿ ಹೊಸ ಪ್ರಕರಣಗಳ ಪ್ರಮಾಣ ಶೇಕಡ 50.4ರಷ್ಟು ಹೆಚ್ಚಿದೆ. ಕಳೆದ ಏಳು ದಿನಗಳಲ್ಲಿ ಒಟ್ಟು 2,187 ಪ್ರಕರಣಗಳು ವರದಿಯಾಗಿದ್ದು ಹಿಂದಿನ ವಾರ 1,454 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹಿಮಾಚಲ ಪ್ರದೇಶದಲ್ಲಿ ಕೂಡಾ ಹಿಂದಿನ ವಾರ ವರದಿಯಾದ 914 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 38.4ರಷ್ಟು ಹೆಚ್ಚಿದೆ. ಕಳೆದ ಏಳು ದಿನಗಳಲ್ಲಿ 1,265 ಪ್ರಕರಣಗಳು ದಾಖಲಾಗಿವೆ.