ಭಾರತ-ಪಾಕ್ ಟಿ-20 ಪಂದ್ಯ ದೇಶದ ಹಿತಾಸಕ್ತಿಗೆ ವಿರುದ್ಧ ಎಂದ ರಾಮ್‌ದೇವ್!

ನಾಗ್ಪುರ, ಅ.24: ಇಂದು (ಅ.24) ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯ ಭಾರತ- ಪಾಕಿಸ್ತಾನ ಪಂದ್ಯ ದೇಶದ ಹಿತಾಸಕ್ತಿಗೆ ಮತ್ತು ರಾಷ್ಟ್ರಧರ್ಮಕ್ಕೆ ವಿರುದ್ಧ ಎಂದು ಯೋಗ ಗುರು ರಾಮ್‌ದೇವ್ ಹೇಳಿದ್ದಾರೆ.
"ಕ್ರಿಕೆಟ್ ಆಟ ಮತ್ತು ಉಗ್ರರ ಆಟ ಏಕಕಾಲಕ್ಕೆ ನಡೆಯಲು ಸಾಧ್ಯವಿಲ್ಲ" ಎಂದು ಅವರು ಪ್ರತಿಪಾದಿಸಿದ್ದಾರೆ.
ನಾಗ್ಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಿವುಡ್‌ನ ಮಾದಕ ವ್ಯಸನ ಭಾರತದಲ್ಲಿ ಯುವ ಜನಾಂಗಕ್ಕೆ ಮಾರಕ ಎಂದು ಹೇಳಿದರು.
ವಾಸ್ತವ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯ ನಡುವೆಯೇ ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಿದಾಗ, "ಇಂಥ ಪರಿಸ್ಥಿತಿಯಲ್ಲಿ ಕ್ರಿಕೆಟ್ ಪಂದ್ಯ ರಾಷ್ಟ್ರಧರ್ಮಕ್ಕೆ ವಿರುದ್ಧ ಹಾಗೂ ದೇಶದ ಹಿತಾಸಕ್ತಿಗೆ ವಿರುದ್ಧವಾದದ್ದು. ಕ್ರಿಕೆಟ್ ಆಟ ಮತ್ತು ಉಗ್ರರ ಆಟ ಜತೆ ಜತೆಗೆ ಸಾಗಲು ಸಾಧ್ಯವಿಲ್ಲ" ಎಂದು ಉತ್ತರಿಸಿದರು.
ಕಪ್ಪು ಹಣ ವಾಪಸ್ಸಾತಿ ಇಂಧನ ಬೆಲೆಯನ್ನು ಇಳಿಸಬಲ್ಲದು ಎಂಬ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಿದಾಗ, "ಪೆಟ್ರೋಲ್ ಬೆಲೆ ಕಚ್ಚಾ ತೈಲದ ಬೆಲೆಗೆ ಅನುಸಾರವಾಗಿರಬೇಕು ಮತ್ತು ಪ್ರಸ್ತಾವಿತ ತೆರಿಗೆ ಕಡಿತಕ್ಕೆ ಅನುಸಾರವಾಗಿರಬೇಕು ಎನ್ನುವುದು ಅಭಿಪ್ರಾಯ" ಎಂದು ಸ್ಪಷ್ಟಪಡಿಸಿದರು.