ಆರ್ಯನ್ ಖಾನ್ ಪ್ರಕರಣದಲ್ಲಿ ಟ್ವಿಸ್ಟ್: ಹಣದ ವ್ಯವಹಾರದಲ್ಲಿ ಎನ್ ಸಿಬಿ ಶಾಮೀಲು, ಸಾಕ್ಷಿಯಿಂದ ಅಫಿಡವಿಟ್

ಹೊಸದಿಲ್ಲಿ: ಮೆಗಾಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಪ್ರಕರಣದಲ್ಲಿ ಮಾದಕದ್ರವ್ಯ ವಿರೋಧಿ ಏಜೆನ್ಸಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ(ಎನ್ ಸಿಬಿ) ಸಾಕ್ಷಿಯೊಬ್ಬರು ಆಘಾತಕಾರಿ ಆರೋಪ ಮಾಡಿದ್ದು ಈ ಪ್ರಕರಣಕ್ಕೆ ತಿರುವು ಲಭಿಸಿದೆ ಎಂದು NDTV ವರದಿ ಮಾಡಿದೆ.
ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಹಾಗೂ ಖಾಸಗಿ ತನಿಖಾಧಿಕಾರಿ ಕೆ.ಪಿ. ಗೋಸಾವಿ 18 ಕೋಟಿ ರೂ. ವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಕೆ.ಪಿ. ಗೋಸಾವಿ ಅವರ ವೈಯಕ್ತಿಕ ಅಂಗರಕ್ಷಕನೆಂದು ಹೇಳಿಕೊಂಡಿರುವ ಪ್ರಭಾಕರ್ ಸೈಲ್ ಅಫಿಡವಿಟ್ ನಲ್ಲಿ ಆರೋಪಿಸಿದ್ದಾರೆ. ಆರ್ಯನ್ ಖಾನ್ ಜೊತೆ ಗೋಸಾವಿ ಅವರ ಸೆಲ್ಫಿ ಈ ಹಿಂದೆ ವೈರಲ್ ಆಗಿತ್ತು.
ಕೆ.ಪಿ. ಗೋಸಾವಿ ಹಾಗೂ ಸ್ಯಾಮ್ ಡಿಸೋಜಾ ನಡುವೆ ರೂ. 18 ಕೋಟಿ ವ್ಯವಹಾರದ ಬಗ್ಗೆ ಕೇಳಿದ್ದೇನೆ. ಅದರಲ್ಲಿ 8 ಕೋಟಿ ರೂ. ಸಮೀರ್ ವಾಂಖೆಡೆಗೆ ಪಾವತಿಸಬೇಕಾಗಿತ್ತು. ಕೆ.ಪಿ.ಗೋಸಾವಿ ಅವರಿಂದ ನಗದು ಪಡೆದು ಸ್ಯಾಮ್ ಡಿಸೋಜಾ ಅವರಿಗೆ ಹಸ್ತಾಂತರಿಸಿರುವುದಾಗಿಯೂ ಅಫಿಡವಿಟ್ ನಲ್ಲಿ ಪ್ರಭಾಕರ್ ಸೈಲ್ ತಿಳಿಸಿದ್ದಾರೆ.
ಅಕ್ಟೋಬರ್ 6 ರಂದು ಹೊರಡಿಸಿದ ಎನ್ ಸಿಬಿಯ ಪತ್ರಿಕಾ ಪ್ರಕಟನೆಯಲ್ಲಿ ಸಾಕ್ಷಿ ಎಂದು ಹೆಸರಿಸಲಾಗಿರುವ ಪ್ರಭಾಕರ್, ಗೋಸಾವಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದರು.
ತಮ್ಮ ಜೀವ ಹಾಗೂ ಸ್ವಾತಂತ್ರ್ಯದ ಬಗ್ಗೆ ಭಯಭೀತನಾಗಿದ್ದು ಅದಕ್ಕಾಗಿಯೇ ಅಫಿಡವಿಟ್ ಸಲ್ಲಿಸಿದ್ದಾಗಿ ಪ್ರಭಾಕರ್ ಹೇಳಿದ್ದಾರೆ.
ಎನ್‌ಸಿಬಿಯ ಪ್ರಮುಖ ಅಧಿಕಾರಿ ಸಮೀರ್ ವಾಂಖೆಡೆ ಅವರು ಯಾವುದೇ ತಪ್ಪನ್ನು ನಿರಾಕರಿಸಿದ್ದಾರೆ. ಇದಕ್ಕೆ ‘ಸೂಕ್ತ ಉತ್ತರ’ ನೀಡುವುದಾಗಿ ಹೇಳಿದ್ದಾರೆ.
ಆರೋಪವನ್ನು ‘ಆಧಾರರಹಿತ’ ಎಂದು ಕರೆದಿರುವ ಎನ್ ಸಿಬಿ, ಹಣವು ಕೈ ಬದಲಾಯಿಸಿದ್ದರೆ "ಯಾರಾದರೂ ಯಾಕೆ ಜೈಲಿನಲ್ಲಿರುತ್ತಾರೆ?. ಏಜೆನ್ಸಿಯ ಗೌರವವನ್ನು ಹಾಳುಮಾಡಲು ಈ ಆರೋಪಗಳನ್ನು ಮಾಡಲಾಗಿದೆ. ಕಚೇರಿಯಲ್ಲಿ ಸಿಸಿಟಿವಿ ಕ್ಯಾಮರಾಗಳಿವೆ ಮತ್ತು ಈ ರೀತಿಯ ಏನೂ ಆಗಿಲ್ಲ" ಎಂದು ಹೇಳಿದೆ.
ಅಕ್ಟೋಬರ್ 2 ರ ಮೊದಲು ತಾವು ಎಂದಿಗೂ ಪ್ರಭಾಕರ್ ಸೈಲ್ ಅವರನ್ನು ಭೇಟಿ ಮಾಡಿಲ್ಲ ಹಾಗೂ ಅವರು ಯಾರೆಂದು ತಿಳಿದಿಲ್ಲ ಎಂದು ದಾಖಲೆಯ ಹೊರತಾಗಿಯೂ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಈ ಅಫಿಡವಿಟ್ ಅನ್ನು ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಕೊಂಡೊಯ್ಯಬಹುದು ಮತ್ತು ನಾವು ಅಲ್ಲಿ ನಮ್ಮ ಪ್ರತಿಕ್ರಿಯೆಯನ್ನು ನೀಡುತ್ತೇವೆ ಎಂದು ಮೂಲಗಳು ತಿಳಿಸಿವೆ.