ರೈತರ ಹತ್ಯೆ ಪ್ರಕರಣ: ಬಂಧಿತ ಕೇಂದ್ರ ಸಚಿವರ ಪುತ್ರನಿಗೆ ಡೆಂಗಿ, ಆಸ್ಪತ್ರೆಗೆ ದಾಖಲು

photo: ANI
ಲಕ್ನೊ: ಉತ್ತರಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧಿತನಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಡೆಂಗ್ ಪಾಸಿಟಿವ್ ಆಗಿದ್ದು, ಆತನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು NDTV ವರದಿ ಮಾಡಿದೆ.
ಶುಕ್ರವಾರ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆಶಿಶ್ ಮಿಶ್ರಾನನ್ನು ಪರೀಕ್ಷಾ ಫಲಿತಾಂಶ ದೃಢಪಡಿಸಿದ ನಂತರ ನಿನ್ನೆ ತಡರಾತ್ರಿ ಲಖಿಂಪುರ ಜೈಲಿಗೆ ಸ್ಥಳಾಂತರಿಸಲಾಯಿತು. ಆತನಿಗೆ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುವುದು.
"ಆಶಿಶ್ ಮಿಶ್ರಾನನ್ನು ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ. ಆತನಿಗೆ ಡೆಂಗಿ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅಲ್ಲದೆ, ಆತನಿಗೆ ಮಧುಮೇಹವಿದೆ" ಎಂದು ಲಖಿಂಪುರ ಖೇರಿಯ ಸಿಎಂಒ ಶೈಲೇಂದ್ರ ಭಟ್ನಾಗರ್ ಹೇಳಿದರು.
ಅಕ್ಟೋಬರ್ 3 ರಂದು ಸಚಿವರ ಮೂರು ಬೆಂಗಾವಲು ವಾಹನ ಪ್ರತಿಭಟನಾನಿರತ ರೈತರ ಮೇಲೆ ಉದ್ದೇಶಪೂರ್ವಕವಾಗಿ ಹರಿದ ಪರಿಣಾಮವಾಗಿ ನಾಲ್ವರು ರೈತರು ಮತ್ತು ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದರು. ಬೆಂಗಾವಲು ವಾಹನದಲ್ಲಿ ಒಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರಿಗೆ ಸೇರಿತ್ತು. ಆ ಕಾರಿನ ಚಾಲಕನ ಸೀಟಿನಲ್ಲಿ ಆಶೀಶ್ ಇದ್ದ ಎಂದು ರೈತರು ಆರೋಪಿಸಿದ್ದರು. ಸಚಿವರ ಪುತ್ರನನ್ನು ಘಟನೆ ನಡೆದು ಐದು ದಿನಗಳ ನಂತರ ಸುಪ್ರೀಂಕೋರ್ಟ್ ನ ಮಧ್ಯಪ್ರವೇಶದ ಬಳಿಕ ಅಕ್ಟೋಬರ್ 9 ರಂದು ಬಂಧಿಸಲಾಗಿತ್ತು.