ಜಮ್ಮು-ಕಾಶ್ಮೀರದಲ್ಲಿ ಆರೆಸ್ಸೆಸ್ ಉಸ್ತುವಾರಿ ಯಾರೆನ್ನುವುದು ಎಲ್ಲರಿಗೂ ಗೊತ್ತು: ಸತ್ಯಪಾಲ ಮಲಿಕ್
ವಿವಾದ ಸೃಷ್ಟಿಸಿರುವ ಆರೆಸ್ಸೆಸ್-ಅಂಬಾನಿ ಲಂಚದ ಆರೋಪ

ಹೊಸದಿಲ್ಲಿ,ಅ.24: ತಾನು ಜಮ್ಮು-ಕಾಶ್ಮೀರದ ರಾಜ್ಯಪಾಲನಾಗಿದ್ದಾಗ ‘ಅಂಬಾನಿ’ ಮತ್ತು ‘ಹಿರಿಯ ಆರೆಸ್ಸೆಸ್ ಪದಾಧಿಕಾರಿ’ಗೆ ಸಂಬಂಧಿಸಿದ ಎರಡು ಕಡತಗಳಿಗೆ ಅಂಗೀಕಾರದ ಮುದ್ರೆಯೊತ್ತಿದ್ದರೆ 300 ಕೋ.ರೂ.ಗಳ ಲಂಚವನ್ನು ತಾನು ಪಡೆಯುತ್ತಿದ್ದೆ ಎಂದು ಇತ್ತೀಚಿಗೆ ಆರೋಪಿಸಿದ್ದ ಹಾಲಿ ಮೇಘಾಲಯದ ರಾಜ್ಯಪಾಲರಾಗಿರುವ ಸತ್ಯಪಾಲ ಮಲಿಕ್,ವ್ಯಕ್ತಿ ಯಾರೆಂದು ಹೆಸರಿಸುವುದು ಸರಿಯಲ್ಲ,ಆದರೆ ಜಮ್ಮು-ಕಾಶ್ಮೀರದಲ್ಲಿ ಆರೆಸ್ಸೆಸ್ ನ ಉಸ್ತುವಾರಿ ಯಾರಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ಶನಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಆದರೆ ತನಗೆ ವಿಷಾದವಿದೆ,ತಾನು ಆರೆಸ್ಸೆಸ್ ನ ಹೆಸರನ್ನು ತೆಗೆದುಕೊಳ್ಳಬಾರದಿತ್ತು. ಯಾವುದೇ ವ್ಯಕ್ತಿ ತನ್ನ ವೈಯಕ್ತಿಕ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಅಥವಾ ಯಾವುದೇ ವ್ಯವಹಾರವನ್ನು ಮಾಡುತ್ತಿದ್ದರೆ ಆತನನ್ನು ಮಾತ್ರ ಪ್ರಸ್ತಾಪಿಸಬೇಕಿತ್ತು. ಆತ ಯಾವುದೇ ಸಂಸ್ಥೆಗೆ ಸೇರಿದ್ದರೂ ಸಂಸ್ಥೆಯ ಹೆಸರನ್ನು ಎಳೆದು ತರಬಾರದಿತ್ತು ಎಂದು ಹೇಳಿದರು.
ಈ ನಡುವೆ ಸೂರತ್ ನಲ್ಲಿ ಮಲಿಕ್ ಆರೋಪಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಆರೆಸ್ಸೆಸ್ ನಾಯಕ ರಾಮ ಮಾಧವ ಅವರು ‘ಅದು ಯಾರು ಅಥವಾ ಏನು’ ಎನ್ನುವುದನ್ನು ಅವರಿಗೇ ಕೇಳಿ ಎಂದರು. ನೀವು ಆ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿದ್ದೀರಿ ಎಂದು ಸುದ್ದಿಗಾರರು ಕೆದಕಿದಾಗ ರಾಮ ಮಾಧವ್,‘‘ಆರೆಸ್ಸೆಸ್ನ ಯಾರೂ ಅಂತಹ ಕೆಲಸವನ್ನು ಮಾಡುವುದಿಲ್ಲ. ಆದರೆ ಯಾವ ಸಂದರ್ಭದಲ್ಲಿ ಅವರು ಹಾಗೆ ಹೇಳಿದ್ದಾರೆ ಅಥವಾ ಅವರು ಹಾಗೆ ಹೇಳಿದ್ದರೋ ಇಲ್ಲವೋ ಎನ್ನುವುದು ನನಗೆ ನಿಜಕ್ಕೂ ಗೊತ್ತಿಲ್ಲ. ನೀವು ಅವರನ್ನೇ ಕೇಳಬೇಕು. ‘ಯಾರೋ ಇದನ್ನು ತಿಳಿಸಿದರು ’ಎಂದು ಅವರು ಹೇಳಿರಬಹುದು. ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಆರೆಸ್ಸೆಸ್ ನ ಯಾರೂ ಎಂದಿಗೂ ಇಂತಹ ಕೆಲಸ ಮಾಡುವುದಿಲ್ಲ. ನಾವು ಚುನಾವಣೆಗಳನ್ನು ಸೋಲುತ್ತೇವೆ,
ನಾವು ರೈತರಿಗೆ ಅನ್ಯಾಯ ಮಾಡಿದ್ದೇವೆ ಎಂದು ಅವರು 2014ರಲ್ಲಿ ಹೇಳಿದ್ದರು.ಇದನ್ನೆಲ್ಲ ನಾವು ನಂಬುತ್ತೇವೆಯೇ? ಅದು ಅವರ ಅಭಿಪ್ರಾಯವಾಗಿರಬಹುದು. ನಿಜ ಏನು ಎನ್ನುವುದು ನಮಗೆ ಗೊತ್ತಿಲ್ಲ ’’ಎಂದು ಹೇಳಿದರು. ಮಲಿಕ್ ಅ.17ರಂದು ರಾಜಸ್ಥಾನದಲ್ಲಿ ಬಹಿರಂಗ ಸಭೆಯೊಂದರಲ್ಲಿ ಈ ಆರೋಪಗಳನ್ನು ಮಾಡಿದ್ದು, ಅವರ ಭಾಷಣದ ವೀಡಿಯೊ ವೈರಲ್ ಆಗಿತ್ತು.
ತಮ್ಮ ಯೋಜನೆಗಳಿಗೆ ಒಪ್ಪಿಗೆ ಪಡೆಯಲು ನಿಮಗೆ ಅಥವಾ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸಿದ್ದವರ ವಿರುದ್ಧ ನೀವು ಕ್ರಮವನ್ನು ಕೈಗೊಂಡಿದ್ದಿರಾ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಮಲಿಕ್,ಅವರು ತನಗೆ ಲಂಚ ನೀಡಲು ಪ್ರಯತ್ನಿಸಿರಲಿಲ್ಲ. ಆದರೆ ಆ ಯೋಜನೆಗಳಲ್ಲಿ ಲಂಚದ ವಾಸನೆಯಿತ್ತು. ಲಂಚವನ್ನು ಪಡೆಯುತ್ತಿದ್ದ ಕೆಲವು ಜನರಿದ್ದರು. ನಾನು ಎರಡೂ ಯೋಜನೆಗಳನ್ನು ರದ್ದುಗೊಳಿಸಿದ್ದರಿಂದ ಯಾವುದೇ ಕ್ರಮದ ಅಗತ್ಯವಿರಲಿಲ್ಲ. ಸಾಕಷ್ಟು ದಂಡನೆಯನ್ನು ಅವರು ಅನುಭವಿಸಿದ್ದರು ’ ಎಂದು ಉತ್ತರಿಸಿದರು.
ತನ್ನ ಭಾಷಣದಲ್ಲಿ ರೋಶ್ನಿ ಯೋಜನೆಯನ್ನೂ ಪ್ರಸ್ತಾಪಿಸಿದ್ದ ಮಲಿಕ್,ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ,ಅವರ ಪುತ್ರ ಉಮರ್ ಅಬ್ದುಲ್ಲಾ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಫಲಾನುಭವಿಗಳಲ್ಲಿ ಸೇರಿದ್ದರು ಎಂದು ಆರೋಪಿಸಿದ್ದರು. ಮಲಿಕ್ ಆರೋಪಗಳು ಆಧಾರರಹಿತ ಎಂದು ಹೇಳಿರುವ ಈ ನಾಯಕರು ಅವರ ವಿರುದ್ಧ ಕಾನೂನು ಕ್ರಮದ ಬೆದರಿಕೆಯನ್ನು ಒಡ್ಡಿದ್ದಾರೆ.
‘ನಾನು ಸತ್ಯವನ್ನೇ ಹೇಳಿದ್ದೇನೆ. ಮುಫ್ತಿಜಿ ನನ್ನ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು,ಹೀಗಾಗಿ ಅವರು (ಮೆಹಬೂಬ) ನನ್ನ ಪುತ್ರಿಯಿದ್ದಂತೆ. ನಾನೆಂದೂ ಅವರ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿಲ್ಲ. ಜನರು ಯೋಜನೆಯ ಲಾಭ ಪಡೆದಿದ್ದರು ಎಂದಷ್ಟೇ ನಾನು ಹೇಳಿದ್ದೆ. ಅವರು ತನ್ನ ಹೆಸರಿನಲ್ಲಿ ಭೂಮಿಯನ್ನು ಪಡೆದಿರಲಿಲ್ಲ,ಆದರೆ ಅವರ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನಗಳನ್ನು ಪಡೆದಿದ್ದರು. ನಿಮಗೆ ಗೊತ್ತು,ಈ ದೇಶದಲ್ಲಿ ಬೇನಾಮಿ ವ್ಯವಹಾರ ತುಂಬ ಕೆಲಸ ಮಾಡುತ್ತದೆ ’ ಎಂದು ಮಲಿಕ್ ಹೇಳಿದರು.
‘‘ಅವರಿಗೆ (ಮೆಹಬೂಬ) ಗೊತ್ತಿರಬೇಕು. ಅವರು ನನಗೆ ಕಾನೂನು ನೋಟಿಸ್ ಕಳುಹಿಸಲು ಅಥವಾ ನನ್ನ ವಿರುದ್ಧ ಕಾನೂನು ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಮೆಹಬೂಬ ನನಗೆ ಕರೆಯನ್ನು ಮಾಡಿ ನನ್ನ ಹೇಳಿಕೆಗಳನ್ನು ಹಿಂದೆಗೆದುಕೊಳ್ಳುವಂತೆ ಸೂಚಿಸಿದ್ದರೆ ನಾನು ಹಾಗೆ ಮಾಡುತ್ತಿದ್ದೆ,ಏಕೆಂದರೆ ಅವರು ನನ್ನೊಂದಿಗೆ ಅಂತಹ ಸಂಬಂಧ ಹೊಂದಿದ್ದಾರೆ. ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ನನ್ನ ಹೇಳಿಕೆಗಳಿಗೆ ನಾನು ಬದ್ಧನಾಗಿದ್ದೇನೆ,ಆದರೆ ನನ್ನ ಹೇಳಿಕೆಗಳಿಂದ ಯಾರಿಗಾದರೂ ನೋವಾಗಿದ್ದರೆ ‘ಅದನ್ನು ಬಿಟ್ಟುಬಿಡೋಣ ’ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ ’’ ಎಂದು ಮಲಿಕ್ ಹೇಳಿದರು.
ಫಾರೂಕ್ ಅಬ್ದುಲ್ಲಾ ಹಿರಿಯರಾಗಿದ್ದಾರೆ,ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದಾರೆ. ನಾನು ಅವರನ್ನು ಗೌರವಿಸುತ್ತೇನೆ ಮತ್ತು ಅವರ ವಿರುದ್ಧ ಯಾವುದೇ ಅವಮಾನಕಾರಿ ಮಾತುಗಳನ್ನಾಡಿಲ್ಲ. ಆದರೆ ಈ ಜನರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎನ್ನುವುದು ಅವರ ವಿರುದ್ಧದ ಸಾಮಾನ್ಯ ಅಭಿಪ್ರಾಯವಾಗಿದೆ. ನಾನಾಗಿಯೇ ಏನನ್ನೂ ಹೇಳಿಲ್ಲ. ಅವರ ವಿರುದ್ಧ ನನಗೆ ಯಾವುದೇ ದುರುದ್ದೇಶವಿಲ್ಲ ’ಎಂದರು.