ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನಕ್ಕೆ 152 ರನ್ ಗುರಿ ನೀಡಿದ ಭಾರತ
ವಿರಾಟ್ ಕೊಹ್ಲಿ ಅರ್ಧಶತಕ

photo:AFP
ದುಬೈ, ಅ.24: ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕದ ಸಹಾಯದಿಂದ ಭಾರತ ತಂಡ ಪಾಕಿಸ್ತಾನ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಪಂದ್ಯದಲ್ಲಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಅವರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ರೋಹಿತ್ (0)ಮೊದಲ ಓವರ್ ನ 4ನೇ ಎಸೆತದಲ್ಲಿ ಶಾಹೀನ್ ಶಾ ಅಫ್ರಿದಿ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ರಾಹುಲ್ (3) ಕೂಡ 2.1ನೇ ಓವರ್ ನಲ್ಲಿ ಅಫ್ರಿದಿ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡಾದರು.
ಸೂರ್ಯಕುಮಾರ್ ಯಾದವ್(11) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಭಾರತವು 31 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್(39,30 ಎಸೆತ, 2 ಬೌಂ. 2 ಸಿ.)4ನೇ ವಿಕೆಟ್ ಗೆ 53 ರನ್ ಜೊತೆಯಾಟ ನಡೆಸಿದರು. ಶಾದಾಬ್ ಖಾನ್ ಈ ಜೋಡಿಯನ್ನು ಬೇರ್ಪಡಿಸಿದರು.
ಪಂತ್ ಔಟಾದ ಬಳಿಕ ರವೀಂದ್ರ ಜಡೇಜ(13,13 ಎಸೆತ) ಅವರೊಂದಿಗೆ 5ನೇ ವಿಕೆಟ್ ಗೆ 41 ರನ್ ಸೇರಿಸಿದ ಕೊಹ್ಲಿ ತಂಡದ ಮೊತ್ತವನ್ನು 125ಕ್ಕೆ ತಲುಪಿಸಿದರು.
45 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅರ್ಧಶತಕ ಸಿಡಿಸಿದ ಕೊಹ್ಲಿ ಇನಿಂಗ್ಸ್ ಗೆ ಶಾಹೀನ್ ಅಫ್ರಿದಿ ತೆರೆ ಎಳೆದರು. ಕೊಹ್ಲಿ 49 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 57 ರನ್ ಗಳಿಸಿದರು.
ಪಾಕ್ ಪರ ಅಫ್ರಿದಿ(3-31) ಹಾಗೂ ಹಸನ್ ಅಲಿ(2-44) 5 ವಿಕೆಟ್ ಹಂಚಿಕೊಂಡರು.