ನಾನು ಬಿಜೆಪಿ ಸಂಸದನಾಗಿರುವುದರಿಂದ ಈಡಿ ನನ್ನ ಮೇಲೆ ದಾಳಿ ಮಾಡುವುದಿಲ್ಲ: ಸಂಜಯ್ ಪಾಟೀಲ್

ಸಂಜಯ್ ಪಾಟೀಲ್ (Photo: Twitter/@PatilSanjaykaka)
ಮುಂಬೈ: ನಾನು ಬಿಜೆಪಿ ಸಂಸದನಾಗಿರುವುದರಿಂದ ಜಾರಿ ನಿರ್ದೇಶನಾಲಯ (ಈಡಿ) ನನ್ನ ಮೇಲೆ ದಾಳಿ ಮಾಡುವುದಿಲ್ಲ ಎಂದು ಮಹಾರಾಷ್ಟ್ರದ ಸಾಂಗ್ಲಿಯ ಬಿಜೆಪಿಯ ಲೋಕಸಭಾ ಸದಸ್ಯ ಸಂಜಯ್ ಪಾಟೀಲ್ ಅವರು ರವಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದರು.
"ನಾನು ಬಿಜೆಪಿ ಸಂಸದನಾದ ಬಳಿಕ ನನ್ನ ಬಳಿ ಈಡಿ ಬಂದಿಲ್ಲ ...40 ಲಕ್ಷ ಮೌಲ್ಯದ ಕಾರನ್ನು ಖರೀದಿಸಲು ನಾವು ಸಾಲವನ್ನು ಮಾಡಿದ್ದು, ನಮ್ಮಲ್ಲಿರುವ ಸಾಲವನ್ನು ನೋಡಿದರೆ ಈಡಿಗೆ ಆಶ್ಚರ್ಯವಾಗಬಹುದು’’ ಎಂದು ಹೇಳಿದರು.
ನಮ್ಮನ್ನು ಯಾರೂ ವಿಚಾರಣೆ ನಡೆಸದ ಕಾರಣ ಬಿಜೆಪಿಯಲ್ಲೀಗ ನಾನು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ ಎಂದು ಇತ್ತೀಚೆಗೆ ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಹೇಳಿದ್ದರು. ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಳ್ಳಲು ಕೇಂದ್ರ ಸರಕಾರವು ಸಿಬಿಐ, ಈಡಿ ಹಾಗೂ ಎನ್ ಸಿಬಿಯಂತಹ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಎನ್ ಸಿಪಿ ವರಿಷ್ಠ ಶರದ್ ಪವಾರ್ ಹೇಳಿಕೆಗೆ ಪುಣೆ ಜಿಲ್ಲೆಯ ಇಂದಪುರದ ಮಾಜಿ ಕಾಂಗ್ರೆಸ್ ನಾಯಕ ಹರ್ಷವರ್ಧನ್ ಈ ರೀತಿ ಪ್ರತಿಕ್ರಿಯಿಸಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ರಾಜ್ಯದಲ್ಲಿ ಆಡಳಿತದಲ್ಲಿರುವ ಮೂರು ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಳ್ಳುವ ಮೂಲಕ ಕೇಂದ್ರೀಯ ಏಜೆನ್ಸಿಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಮಹಾವಿಕಾಸ್ ಅಘಾಡಿಯ ಮಿತ್ರಪಕ್ಷಗಳಾಗಿರುವ ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಆರೋಪಿಸಿವೆ.