ಉತ್ತರಪ್ರದೇಶ ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಬಿಜೆಪಿಯನ್ನು ವಿರೋಧಿಸಲಿದೆ: ಟಿಕಾಯತ್
ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಯುವಕನ ಕುಟುಂಬ ಭೇಟಿಯಾದ ರೈತ ನಾಯಕ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಗೀಡಾದ ಅರುಣ್ ನರ್ವಾರ್ ಅವರ ಕುಟುಂಬವನ್ನು ಸೋಮವಾರ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಭೇಟಿ ಮಾಡಿದರು. 40 ಲಕ್ಷ ರೂಪಾಯಿ ಪರಿಹಾರ ಹಾಗೂ ನರ್ವಾರ್ ಅವರ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು.
ಕೃಷಿ ಕಾನೂನುಗಳ ಬಗ್ಗೆ ಬಿಜೆಪಿ ಸರಕಾರವನ್ನು ಟಾರ್ಗೆಟ್ ಮಾಡಿದ ಟಿಕಾಯತ್ "ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ನಾನು ರೈತರನ್ನು ಒತ್ತಾಯಿಸುತ್ತೇನೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಬಿಜೆಪಿಯನ್ನು ವಿರೋಧಿಸುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ನಾವು ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದರು.
ನರ್ವಾರ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟಿಕಾಯತ್ ''ರಾಜ್ಯ ಸರಕಾರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಲಖಿಂಪುರ ಖೇರಿ ಹಾಗೂ ಕಾನ್ಪುರದಲ್ಲಿ 40-45 ಲಕ್ಷ ರೂ.ಗಳ ಪರಿಹಾರ ನೀಡಿದ್ದರೆ, ಆಗ್ರಾದಲ್ಲಿ ಸರಕಾರ 10 ಲಕ್ಷ ರೂ. ನೀಡಿದೆ. ಅರುಣ್ ಕುಟುಂಬಕ್ಕೆ ರಾಜ್ಯ ಸರಕಾರ 40 ಲಕ್ಷ ರೂ. ಪರಿಹಾರ ನೀಡಬೇಕು. ಸರಕಾರ ತಾರತಮ್ಯ ಮಾಡಬಾರದು" ಎಂದು ಅವರು ಹೇಳಿದರು.
ನರ್ವಾರ್ ಅವರ ಕುಟುಂಬದ ಸದಸ್ಯರಿಗೆ ಸರಕಾರಿ ಕೆಲಸ ಮತ್ತು ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ಜಗದೀಶ್‌ಪುರ ಪೊಲೀಸ್ ಠಾಣೆಯಿಂದ 25 ಲಕ್ಷ ರೂಪಾಯಿ ಕದ್ದ ಆರೋಪದ ಮೇಲೆ ನರ್ವಾರ್ ಆರೋಪಿಯಾಗಿದ್ದು, ಅಕ್ಟೋಬರ್ 19 ರಂದು ವಿಚಾರಣೆಯ ವೇಳೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.