5 ಕೋಟಿ ಮೌಲ್ಯದ ನಕಲಿ ನೋಟುಗಳ ವಶ; ಬಿಬಿಎಂಪಿ ಗುತ್ತಿಗೆದಾರ ಸೇರಿ ಹಲವರ ಸೆರೆ

ಬೆಂಗಳೂರು, ಅ.26: ಗರಿಷ್ಠ ಮುಖಬೆಲೆಯ ಅಮಾನೀಕರಣಗೊಂಡಿರುವ ನೋಟು ಬದಲಾವಣೆ ದಂಧೆ ಆರೋಪ ಪ್ರಕರಣ ಸಂಬಂಧ ಬಿಬಿಎಂಪಿ ಗುತ್ತಿಗೆದಾರ ಸೇರಿ ಏಳು ಮಂದಿಯನ್ನು ಇಲ್ಲಿನ ಗೋವಿಂದಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಟ್ಟೆ ವ್ಯಾಪಾರಿಗಳಾದ ಸುರೇಶ್ ಕುಮಾರ್, ರಾಮಕೃಷ್ಣ, ಬಿಬಿಎಂಪಿ ಉಪ ಗುತ್ತಿಗೆದಾರ ವೆಂಕಟೇಶ್, ಮಂಜುನಾಥ್ ದಯಾನಂದ್, ಶಿವ ಮತ್ತು ಪಳನಿಸ್ವಾಮಿ ಬಂಧಿತ ಅರೋಪಿಗಳು ಎಂದು ಪೊಲೀಸರು ಹೇಳಿದ್ದಾರೆ.
ಎಚ್‍ಬಿಆರ್ ಲೇಔಟ್‍ನ ಪೆಟ್ರೋಲ್‍ಬಂಕ್ ಬಳಿ ಮೂವರು ಅಪರಿಚಿತರು ಹಳೆಯ ನೋಟುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು, ಪ್ರಕರಣ ಭೇದಿಸಲಾಗಿದೆ.
ಆರಂಭದಲ್ಲಿ ಇಬ್ಬರನ್ನು ಬಂಧಿಸಿ 1 ಸಾವಿರ ಹಾಗೂ 500 ಮುಖಬೆಲೆಯ 45 ಲಕ್ಷ ಹಣ ಜಪ್ತಿ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ದಂಧೆಯಲ್ಲಿ ತೊಡಗಿದ್ದ ಐವರನ್ನು ಬಂಧಿಸಿ ಮತ್ತೆ 35 ಲಕ್ಷ ನಕಲಿ ನೋಟುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ತನಿಖೆ ವೇಳೆ ಅಂತಾರಾಜ್ಯದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳ ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳದ ಕಾಸರಗೋಡಿನ ಗೋದಾಮಿನ ಮೇಲೆ ದಾಳಿ ಮಾಡಿದಾಗ 5 ಕೋಟಿ ಮೌಲ್ಯದ ಕಲರ್ ಜೆರಾಕ್ಸ್ ನೋಟುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳು ಶೇ.20 ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.







