ಬಾಡಿಗೆ ಪಾವತಿಸದ 12 ಅಂಗಡಿಗಳಿಗೆ ಉಡುಪಿ ನಗರಸಭೆಯಿಂದ ಬೀಗ

ಉಡುಪಿ, ಅ.26: ಕೋವಿಡ್ ಅವಧಿ ಹೊರತು ಪಡಿಸಿ, ಒಂದು ಲಕ್ಷ ರೂ. ಅಧಿಕ ಬಾಡಿಗೆ ಹಣ ಪಾವತಿಸದೆ ಬಾಕಿ ಇರಿಸಿರುವ ಉಡುಪಿ ನಗರಸಭೆಗೆ ಸಂಬಂಧಿಸಿದ ವಾಣಿಜ್ಯ ಕಟ್ಟಡದಲ್ಲಿರುವ ಕಾರ್ಯಾಚರಿಸುತ್ತಿರುವ ಒಟ್ಟು 12 ಅಂಗಡಿಗಳಿಗೆ ಬೀಗ ಜಡಿದು ಜಪ್ತಿ ಮಾಡಲಾಗಿದೆ.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿರುವ ನಗರಸಭೆಗೆ ಸಂಬಂಧಿಸಿದ ವಾಣಿಜ್ಯ ಕಟ್ಟಡದಲ್ಲಿರುವ ಹಲವು ಅಂಗಡಿಗಳು ಬಾಡಿಗೆ ಹಣ ಪಾವತಿಸದೆ ಲಕ್ಷಾಂತರ ರೂ. ಬಾಕಿ ಇರಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ಕಳೆ ಹಾಕುತ್ತಿರುವ ನಗರಸಭೆ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ, ಒಂದು ಲಕ್ಷಕ್ಕಿಂತ ಹೆಚ್ಚು ಹಣ ಬಾಕಿ ಇರಿಸಿರುವ ಅಂಗಡಿಗಳ ವಿರುದ್ಧ ಕ್ರಮ ಜರಗಿಸಿದ್ದಾರೆ.
ಅದರಂತೆ ಅ.25ರಂದು ನಾಲ್ಕು ಮತ್ತು ಅ.26ರಂದು 8 ಅಂಗಡಿಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಈ ಅಂಗಡಿಯವರು ಕೋವಿಡ್ ಅವಧಿ ಹೊರತು ಪಡಿಸಿಯೂ ಕಳೆದ ಎರಡು ಮೂರು ವರ್ಷಗಳಿಂದ 2-3ಲಕ್ಷ ರೂ. ಬಾಡಿಗೆ ಹಾಣ ಪಾವತಿಸದೆ ಬಾಕಿ ಇರಿಸಿಕೊಂಡಿದ್ದಾರೆ.
‘ಇನ್ನು ಇದೇ ರೀತಿ ಬಾಡಿಗೆ ಬಾಕಿ ಇರಿಸಿರುವ ಅಂಗಡಿಗಳು ಸಾಕಷ್ಟಿದ್ದು, ಅವುಗಳ ವಿರುದ್ಧವೂ ಇದೇ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು. ಆದುದರಿಂದ ಬಾಕಿ ಇರಿಸಿರುವವರು ಕೂಡಲೇ ಹಣವನ್ನು ನಗರಸಭೆಗೆ ಪಾವತಿಸಬೇಕು ಎಂದು ಉಡುಪಿ ನಗರಸಭೆ ಕಂದಾಯ ಅಧಿಕಾರಿ ಧನಂಜಯ ಸೂಚಿಸಿದ್ದಾರೆ.







