ಬ್ಲ್ಯಾಕ್ ಲೈವ್ಸ್ ಮ್ಯಾಟರ್‌ಗಾಗಿ ಮಂಡಿಯೂರಿದ ದಕ್ಷಿಣ ಆಫ್ರಿಕ ತಂಡ; ಹೊರಗುಳಿದ ಕ್ವಿಂಟನ್ ಡಿ ಕಾಕ್

ದುಬೈ, ಅ. 26: ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ವೆಸ್ಟ್‌ಇಂಡೀಸ್ ವಿರುದ್ಧ ಮಂಗಳವಾರ ನಡೆದ ಟ್ವೆಂಟಿ-20 ವಿಶ್ವಕಪ್ ಪಂದ್ಯದಿಂದ ವೈಯಕ್ತಿಕ ಕಾರಣಗಳಿಗಾಗಿ ಹೊರಗುಳಿದಿದ್ದಾರೆ. ಪಂದ್ಯಾವಳಿಯಲ್ಲಿ ಇನ್ನುಳಿದ ಪಂದ್ಯಗಳಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್(ಕಪ್ಪು ವರ್ಣೀಯರ ಜೀವಗಳಿಗೂ ಬೆಲೆಯಿದೆ) ಅಭಿಯಾನಕ್ಕೆ ಬೆಂಬಲ ಸೂಚಿಸಿ ಪಂದ್ಯಕ್ಕೆ ಮುನ್ನ ಆಟಗಾರರು ಮಂಡಿಯೂರಬೇಕು ಎಂಬುದಾಗಿ ತಂಡದ ಆಡಳಿತವು ಆಟಗಾರರಿಗೆ ಸೂಚಿಸಿದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ವೈಯಕ್ತಿಕ ಕಾರಣಗಳಿಗಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದ ಟಾಸ್ ಸಂದರ್ಭದಲ್ಲಿ ದಕ್ಷಿಣ ಆಫ್ರಿಕ ತಂಡದ ನಾಯಕ ಟೆಂಬ ಬವುಮ ಹೇಳಿದರು.
ಜನಾಂಗೀಯ ತಾರತಮ್ಯದ ವಿರುದ್ಧ ತಂಡವು ಸ್ಥಿರ ಹಾಗೂ ಒಗ್ಗಟ್ಟಿನ ನಿಲುವನ್ನು ತೆಗೆದುಕೊಳ್ಳಬೇಕು ಹಾಗೂ ಅದಕ್ಕಾಗಿ ಪಂದ್ಯಾವಳಿಯ ಇನ್ನುಳಿದ ಪಂದ್ಯಗಳ ಆರಂಭಕ್ಕೆ ಮುನ್ನ ಆಟಗಾರರು ಮಂಡಿಯೂರಬೇಕು ಎಂಬ ನಿರ್ಧಾರವನ್ನು ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಕ್ರಿಕೆಟ್ ಸೌತ್ ಆಫ್ರಿಕ (ಸಿಎಸ್‌ಎ) ಹೇಳಿದೆ.
ಈ ವಿಷಯದಲ್ಲಿ ವಿಶ್ವಕಪ್‌ನಲಿ ಆಡುತ್ತಿರುವ ಇತರ ಹಲವು ತಂಡಗಳು ಸ್ಥಿರ ನಿಲುವನ್ನು ತೆಗೆದುಕೊಂಡಿವೆ ಹಾಗೂ ಇದೇ ಮಾದರಿಯನ್ನು ಅನುಸರಿಸಲು ದಕ್ಷಿಣ ಆಫ್ರಿಕದ ಎಲ್ಲ ಆಟಗಾರರಿಗೆ ಇದು ಸಕಾಲ ಎಂಬುದಾಗಿ ಮಂಡಳಿ ಅಭಿಪ್ರಾಯಪಟ್ಟಿದೆ ಎಂದು ಸಿಎಸ್‌ಎ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಹಿಂದೆಯೂ ಈ ವಿಷಯದಲ್ಲಿ ಮಂಡಿಯೂರಲು ಡಿ ಕಾಕ್ ನಿರಾಕರಿಸಿದ್ದರು. ಅದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅವರು ಹೇಳಿದ್ದರು.
ಇದು ಅವರವರ ನಿರ್ಧಾರ. ಏನನ್ನೇ ಮಾಡಲು ಯಾರನ್ನೂ ಬಲವಂತಪಡಿಸುವಂತಿಲ್ಲ. ಇದು ನನ್ನ ರೀತಿ, ಅಷ್ಟೆ ಎಂಬುದಾಗಿ ಡಿ ಕಾಕ್ ಜೂನ್‌ನಲ್ಲಿ ಹೇಳಿದ್ದರು.
ತಂಡವನ್ನು ಬೆಸೆಯುವ ಅಂಟು: ಸಿಎಸ್‌ಎ ಅಧ್ಯಕ್ಷ
ಜನಾಂಗೀಯ ತಾರತಮ್ಯವನ್ನು ನಿವಾರಿಸುವ ಬದ್ಧತೆಯು ತಂಡವನ್ನು ಬೆಸೆಯುವ ಅಂಟು ಆಗಬೇಕು ಎಂದು ಕ್ರಿಕೆಟ್ ಸೌತ್ ಆಫ್ರಿಕ ಅಧ್ಯಕ್ಷ ಲಾಸನ್ ನಾಯ್ಡು ಹೇಳಿದ್ದಾರೆ.
ನಮ್ಮ ದೈನಂದಿನ ಬದುಕಿನ ಹಲವು ವಿಷಯಗಳಲ್ಲಿ ವೈವಿಧ್ಯತೆ ಇರಬಹುದು ಹಾಗೂ ಇರಬೇಕು. ಆದರೆ ಜನಾಂಗೀಯ ತಾರತಮ್ಯದ ವಿರುದ್ಧ ನಿಲುವು ತೆಗೆದುಕೊಳ್ಳುವ ವಿಷಯದಲ್ಲಿ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು.