ನಾಳೆ ಐವರು ಸದಸ್ಯರ ಜಾಗೃತ ದಳದಿಂದ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿಚಾರಣೆ

Photo: ANI
ಹೊಸದಿಲ್ಲಿ: ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದ ಪ್ರಭಾರ ವಲಯ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊದ ಜಾಗೃತ ದಳದ ಐವರು ಸದಸ್ಯರ ತಂಡ ನಾಳೆ ಮುಂಬೈಗೆ ತೆರಳಲಿದೆ.
ಪ್ರಕರಣದಲ್ಲಿ ಸಾಕ್ಷಿ ಎಂದು ಹೆಸರಿಸಲಾದ ವ್ಯಕ್ತಿಯೊಬ್ಬರು ತನಿಖಾಧಿಕಾರಿ ಸಮೀರ್ ವಿರುದ್ಧ ಮಾಡಿದ ಲಂಚದ ಆರೋಪದ ಬಗ್ಗೆ ವಿಜಿಲೆನ್ಸ್ ತನಿಖೆಗೆ ಎನ್ ಸಿಬಿ ಆದೇಶಿಸಿತ್ತು.
ವಾಂಖೆಡೆ ಅವರು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರಿಂದ ಸುಲಿಗೆಯಿಂದ ಹಿಡಿದು ಅಕ್ರಮವಾಗಿ ಫೋನ್ ಕದ್ದಾಲಿಕೆ ಮತ್ತು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡಿದ್ದು ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ.
26 ಆರೋಪಗಳಿರುವ ಪತ್ರವನ್ನು ಟ್ವೀಟ್ ಮಾಡಿರುವ ಮಲಿಕ್ ಎನ್ ಸಿಬಿ ಅಧಿಕಾರಿ ಸಮೀರ್ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅವರು ಈ ವಿಷಯದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಇಂದು ಬೆಳಗ್ಗೆ ಡ್ರಗ್ಸ್ ಕಂಟ್ರೋಲ್ ಏಜೆನ್ಸಿಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಮುತಾ ಅಶೋಕ್ ಜೈನ್ ಹೇಳಿದರು.
ವಾಂಖೆಡೆ ನಿನ್ನೆ ದಿಲ್ಲಿಗೆ ಬಂದಿದ್ದರು. ಆದರೆ ತಮ್ಮ ಮೇಲಧಿಕಾರಿಗಳು ತನಗೆ ಸಮನ್ಸ್ ನೀಡಿದ್ದಾರೆ ಎಂಬ ವರದಿಯನ್ನು ಸಮೀರ್ ತಳ್ಳಿಹಾಕಿದ್ದರು. ಸಚಿವರ ಆರೋಪವನ್ನು ತಳ್ಳಿ ಹಾಕಿದ್ದ ಸಮೀರ್ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು.