ಗುಜರಾತ್ ಗಲಭೆಯಲ್ಲಿ ಮೋದಿ ಕ್ಲೀನ್ ಚಿಟ್ ಪ್ರಶ್ನಿಸಿ ಝಕಿಯಾ ಝಾಫ್ರಿ ಅರ್ಜಿ ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ,ಸೆ.26: 2002ರ ಗುಜರಾತ್ ಹಿಂಸಾಚಾರ ಪ್ರಕರಣಗಳಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ತನಿಖಾ ತಂಡ (ಸಿಟ್) ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ, ಮೃತ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಪ್ರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಆರಂಭಿಸಿದೆ.
ಗುಜರಾತ್ ಗಲಭೆಯಲ್ಲಿ ಆಡಳಿತಾತ್ಮಕ ನಿಷ್ಕ್ರಿಯತೆಯ ಜೊತೆಗೆ ಹಿಂಸಾಚಾರದಲ್ಲಿ ಪೊಲೀಸರು ಶಾಮೀಲಾಗಿದ್ದು ಅದೊಂದು ಬೃಹತ್ ಮಟ್ಟದ ಸಂಚಾಗಿದೆ ಎಂದು ಝಕಿಯಾ ಝಾಪ್ರಿ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.
ಗುಜರಾತ್ ಗಲಭೆಗೆ ಸಂಬಂಧಿಸಿ ವಿಶೇಷ ತನಿಖಾ ತಂಡವು ನರೇಂದ್ರ ಮೋದಿ ಹಾಗೂ ಇತರ 63 ಮಂದಿಗೆ 2012ರ ಫೆಬ್ರವರಿ 8ರಂದು ಕ್ಲೀನ್ ಚಿಟ್ ನೀಡಿದ್ದು, ಅವರು ಗಲಭೆ ಸಂಚಿನಲ್ಲಿ ಶಾಮೀಲಾಗಿರುವ ಬಗ್ಗೆ ಯಾವುದೇ ಕಾನೂನುಕ್ರಮಕ್ಕೊಳಗಾಗಬಹುದಾದ ಪುರಾವೆಗಳಿಲ್ಲವೆಂದು ತಿಳಿಸಿತ್ತು.
ಸಿಟ್ ತನಿಖಾ ಮುಕ್ತಾಯದ ವರದಿಯನ್ನು ವಿರೋಧಿಸಿ ಝಕಿಯಾ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಮ್ಯಾಜಿಸ್ಟ್ರೇಟ್ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಜಾಪ್ರಿ ಅವರು 2017 ಆಕ್ಟೋಬರ್ನಲ್ಲಿ ಗುಜರಾತ್ ಹೈಕೋರ್ಟ್ ಮೆಟ್ಟಲೇರಿದ್ದರು. ಅಲ್ಲಿಯೂ ಅವರ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿತು. ಆನಂತರ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.
6ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದ ಎಹ್ಸಾನ್ ಜಾಫ್ರಿಯವರು 2002ರ ಗುಜರಾತ್ ಗಲಭೆಯ ಸಂದರ್ಭ ಅಹ್ಮದಾಬಾದ್ ನ ಗುಲ್ಬರ್ಗ ಸೊಸೈಟಿ ವಸತಿ ಕಟ್ಟಡದಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ್ದ 69 ಮಂದಿಯಲ್ಲೊಬ್ಬರಾಗಿದ್ದರು.
ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ.ಟಿ.ರವಿಕುಮಾರ್ ನೇತೃತ್ವದ ನ್ಯಾಯಪೀಠವು ಪ್ರಕರಣದ ಆಲಿಕೆಯನ್ನು ಪುನರಾರಂಭಿಸಿತು.ಅರ್ಜಿದಾರೆ ಝಕಿಯಾ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಪ್ರಕರಣದ ಹಿನ್ನೆಲೆಯ ವಿವರಗಳನ್ನು ನ್ಯಾಯಾಲಯದ ಮುಂದೆ ನಿವೇದಿಸಿದರು.
ಗುಜರಾತ್ ಗಲಭೆಯಲ್ಲಿ ಪೊಲೀಸರ ನಿಷ್ಕ್ರಿಯತೆಯಿಂದಾಗಿ ಜನರ ನರಮೇಧ ನಡೆಯಿತು. ಇದಕ್ಕೆ ನಾನು ಅಧಿಕೃತ ಪುರಾವೆಯನ್ನು ನೀಡುತ್ತಿದ್ದೇನೆ. ಇದಕ್ಕಾಗಿ ಮುಂದಿನ ತಲೆಮಾರಿಗೆ ಯಾರು ಉತ್ತರ ನೀಡಬೇಕಾಗುತ್ತದೆ? ಎಂದು ಸಿಬಲ್ ಪ್ರಶ್ನಿಸಿದರು.