ರಾಜ್ಯದಲ್ಲಿ ಕನ್ನಡದ ಸಬಲೀಕರಣಕ್ಕೆ ಕಾರ್ಯಸೂಚಿ : ಚನ್ನೇಗೌಡ
ಉಡುಪಿ, ಅ.26: ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡವನ್ನು ಒತ್ತುಕೊಟ್ಟು ಅನುಷ್ಠಾನಗೊಳಿಸಲು ಕಾರ್ಯಸೂಚಿಗಳನ್ನು ಹೊಂದಿದ್ದು, ತಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಇನ್ನು ಯಶಸ್ವಿಯಾಗಿ ಜಾರಿಗೊಳಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಬೆಂಗಳೂರಿನ ವ.ಚ.ಚನ್ನೇಗೌಡ ಹೇಳಿದ್ದಾರೆ.
ನ.21ರಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಯಲ್ಲಿ ಅಭ್ಯರ್ಥಿಯಾಗಿರುವ ಚನ್ನೇಗೌಡ ಮತಯಾಚನೆಗಾಗಿ ಜಿಲ್ಲೆಗೆ ಆಗಮಿಸಿದ್ದು, ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕನ್ನಡ ಕ್ರಿಯಾ ಸಮಿತಿಯನ್ನು ಸ್ಥಾಪಿಸಿ ಈಗ ಅಧ್ಯಕ್ಷರಾಗಿರುವ ಚನ್ನೇಗೌಡ, ಆಡಳಿತದಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ತಾನು ನಡೆಸಿದ ಹೋರಾಟವನ್ನು ವಿವರಿಸಿ ಕಳೆದ ನಾಲ್ಕು ದಶಕಗಳಿಂದ ನಾಡು-ನುಡಿಗಾಗಿ ನಾಡಿನೆಲ್ಲೆಡೆ ನಡೆದ ಚಳವಳಿಗಳಲ್ಲಿ ಭಾಗವಹಿಸಿದ್ದೇನೆ ಎಂದರು.
ಮಂಡ್ಯ ತಾಲೂಕು ನಾಗಮಂಗಲ ತಾಲೂಕು ವಡೇರಹಳ್ಳಿಯವರಾದ ಚನ್ನೇಗೌಡ, 1988ರಲ್ಲಿ ಕೆಎಸ್ಸಾರ್ಟಿಸಿಯಲ್ಲಿ ಕನ್ನಡ ಕ್ರಿಯಾ ಸಮಿತಿಯನ್ನು ಸ್ಥಾಪಿಸಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೊಂದಿಗೆ ಸೇರಿ 2007ರಲ್ಲಿ ಏಳು ಲಕ್ಷ ರೂ.ಮೊತ್ತದ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ನಾಡಿನ ಹಿರಿಯ ಸಾಹಿತಿಗೆ ನೀಡುತ್ತಿರುವುದಾಗಿ ತಿಳಿಸಿದರು. ಅದೇ ರೀತಿ ಪ್ರತಿವರ್ಷ ನಾಡಿನ ಐವರು ಯುವ ಸಾಹಿತಿಗಳಿಗೆ ಮಯೂರ ವರ್ಮ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ, ಡಾ.ರಾಜ್ ಕುಮಾರ್ ರಂಗ ಪ್ರಶಸ್ತಿ ಹಾಗೂ ರಾಮಜಾಧವ ಗ್ರಂಥ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ತಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಪರಿಷತ್ತಿನಲ್ಲಿ ಶಾಶ್ವತ ನಿಘಂಟು ವಿಭಾಗದ ಸ್ಥಾಪನೆ, ಕನ್ನಡದ ಪ್ರಮುಖ್ಯ ಸಾಹಿತ್ಯಗಳನ್ನು ಅನ್ಯ ಭಾಷೆಗಳಿಗೆ ಅನುವಾದಕ್ಕೆ ಆದ್ಯತೆ, ಆನ್‌ಲೈನ್‌ನಲ್ಲಿ ಕಸಾಪ ಸದಸ್ಯತ್ವ, ಪುಸ್ತಕ ಖರೀದಿಗೆ ಅವಕಾಶ, ಯುವ ಬರಹಗಾರರು ಹಾಗೂ ಮಹಿಳೆಯರಿಗೆ ಪರಿಷತ್ತಿನ ವೇದಿಕೆಗಳಲ್ಲಿ ಹೆಚ್ಚು ಅವಕಾಶ, ಐದು ವರ್ಷಗಳ ಅವಧಿಯಲ್ಲಿ ಕನಿಷ್ಠ ಎರಡು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಯನ್ನು ಮಹಿಳೆಯರಿಗೆ ನೀಡುವುದಾಗಿ ಪ್ರಕಟಿಸಿದರು.
ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಅಶಕ್ತ ಸಾಹಿತಿ ಹಾಗೂ ಕಲಾವಿದರಿಗೆ ಆರೋಗ್ಯ ವಿಮೆ ಜಾರಿ, ಪರಿಷ್ಕೃತ ಡಾ. ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಲು ಸರಕಾರದ ಮೇಲೆ ಒತ್ತಡ ಹೇರುವುದಾಗಿ ಅವರು ನಾಡಿನ ಜನತೆಗೆ ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ರಫಾಯಿಲ್ ರಾಜ್, ಗಜಣ್ಣ, ಉಡುಪಿಯ ರವಿರಾಜ್ ಉಪಸ್ಥಿತರಿದ್ದರು.







