ಪೆಲೆಸ್ತೀನ್ ಮಾನವಹಕ್ಕು ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಹೆಸರಿಸಿದ ಇಸ್ರೇಲ್
ವಿಶ್ವಸಂಸ್ಥೆ ಪ್ರತಿನಿಧಿಗಳ ಖಂಡನೆ

ನ್ಯೂಯಾರ್ಕ್, ಅ.26: ಪೆಲೆಸ್ತೀನ್‌ನ 6 ಮಾನವಹಕ್ಕು ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಯೆಂದು ಸೂಚಿಸುವ ಇಸ್ರೇಲ್ ಅಧಿಕಾರಿಗಳ ನಿರ್ಧಾರವನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ತಜ್ಞರು ಬಲವಾಗಿ ಮತ್ತು ಸ್ಪಷ್ಟವಾಗಿ ಖಂಡಿಸಿದ್ದಾರೆ .
ಈ ನಿಯೋಜನೆಯು ಪೆಲೆಸ್ತೀನ್‌ನ ಮಾನವ ಹಕ್ಕುಗಳ ಅಭಿಯಾನದ ಮೇಲೆ ಹಾಗೂ ಎಲ್ಲೆಡೆಯ ಮಾನವ ಹಕ್ಕುಗಳ ಮೇಲೆ ನಡೆದ ನೇರ ಆಕ್ರಮಣವಾಗಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಶೇಷ ಪ್ರತಿನಿಧಿಗಳು(ತಜ್ಞರು) ಖಂಡಿಸಿದ್ದಾರೆ. ‘ಅವರ ಧ್ವನಿಯನ್ನು ಹತ್ತಿಕ್ಕುವುದು ಮಾನವ ಹಕ್ಕುಗಳ ಮತ್ತು ಮಾನವೀಯ ಮಾನದಂಡಗಳನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಾದ ಕ್ರಮವಲ್ಲ.
ಈ ಸಂಘಟನೆಗಳು ಮಾನವಹಕ್ಕು ಉಲ್ಲಂಘನೆಯ ಪ್ರಕರಣದ ಬಗ್ಗೆ ನಮ್ಮನ್ನು ಎಚ್ಚರಿಸುತ್ತವೆ, ಉಲ್ಲಂಘಿಸಿದವರನ್ನು ಹೊಣೆಗಾರರನ್ನಾಗಿಸುವಲ್ಲಿ ಅಂತರಾಷ್ಟ್ರೀಯ ಸಮುದಾಯದ ಬಾಧ್ಯತೆಗಳನ್ನು ನೆನಪಿಸುತ್ತವೆ, ಹಾಗೂ ಧ್ವನಿಯನ್ನು ಕಳೆದುಕೊಂಡವರ ಧ್ವನಿಯಾಗುತ್ತವೆ. ಇವರನ್ನು ಅಂತರಾಷ್ಟ್ರೀಯ ಸಮುದಾಯ ಬಲವಾಗಿ ಸಮರ್ಥಿಸಿಕೊಳ್ಳಬೆೀಕು ’ ಎಂದವರು ಕರೆ ನೀಡಿದ್ದಾರೆ.
ಭಯೋತ್ಪಾದನೆ ನಿಗ್ರಹ ಕಾನೂನುಗಳನ್ನು ಸ್ವಾತಂತ್ರ್ಯದ ಶಕ್ತಿಗುಂದಿಸುವ ಸಾಧನವನ್ನಾಗಿ ಬಳಸಬಾರದು. ಭಯೋತ್ಪಾದನೆ ನಿಗ್ರಹ ಕಾನೂನನ್ನು ಬಳಸುವ ಅಗತ್ಯ ಸಂದರ್ಭದ ಬಗ್ಗೆ ಭದ್ರತಾ ಸಮಿತಿ ಹಾಗೂ ವಿಶ್ವಸಂಸ್ಥೆಯ ಇತರ ಸಮಿತಿಗಳಿಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಇಸ್ರೇಲ್‌ನ ಅಧಿಕಾರಿಗಳಿಗೆ ನೆನಪಿಸ ಬಯಸುತ್ತೇವೆ ಎಂದು ವಿಶೇಷ ಪ್ರತಿನಿಧಿಗಳು ಹೇಳಿದ್ದಾರೆ. ಹೇಳಿಕೆಗೆ ಸಹಿ ಹಾಕಿರುವ ವಿಶೇಷ ಪ್ರತಿನಿಧಿಗಳಲ್ಲಿ 1967ರಿಂದ ಆಕ್ರಮಿತ ಪೆಲೆಸ್ತೀನ್ ಪ್ರದೇಶದಲ್ಲಿ ಮಾನವಹಕ್ಕು ವಿಶೇಷ ಪ್ರತಿನಿಧಿಯಾಗಿರುವ ಮಾರ್ಟಿನ್ ಲಿಂಕ್, ಮಾನವಹಕ್ಕಿನ ಸಂರಕ್ಷಣೆ ಮತ್ತು ಮಾನವಹಕ್ಕಿಗೆ ಪ್ರೋನೀಡುವ ಪ್ರತಿನಿಧಿ ಫಿಯೊನುಲಾ ನಿ ಅಯೊಲಿನ್ ಸೇರಿದ್ದಾರೆ.
ವಿಶೇಷ ಪ್ರತಿನಿಧಿಗಳು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯಲ್ಲಿ ವೈಯಕ್ತಿಕ ನೆಲೆಯಲ್ಲಿ ಮತ್ತು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುವ ತಜ್ಞರಾಗಿದ್ದಾರೆ. ಇವರು ವಿಶ್ವಸಂಸ್ಥೆಯ ಸಿಬಂದಿಗಳಲ್ಲ ಅಥವಾ ಅವರ ಾರ್ಯಕ್ಕೆ ವೇತನ ದೊರಕುವುದಿಲ್ಲ.
ಕೈದಿಗಳಿಗೆ ಕಾನೂನು ನೆರವು ಒದಗಿಸುವ ಮತ್ತು ಬಂಧನ ಹಾಗೂ ವಶಕ್ಕೆ ಪಡೆದವರ ಬಗ್ಗೆ ಅಂಕಿಅಂಶ ಒದಗಿಸುವ ಪೆಲೆಸ್ತೀನ್ ಸಂಘಟನೆ ಅದ್ದಾಮೀರ್, ಮಾನವ ಹಕ್ಕು ಉಲ್ಲಂಘನೆ ಪ್ರಕರಣದ ದಾಖಲೆ ಸಂಗ್ರಹಿಸುವ, ಪೆಲೆಸ್ತೀನ್ ಸಂಘಟನೆ ಅಲ್-ಹಖ್, ಮಕ್ಕಳ ರಕ್ಷಣೆಗಾಗಿನ ಅಂತರಾಷ್ಟ್ರೀಯ ಪೆಲೆಸ್ತೀನ್ ಸಂಘಟನೆ, ಯೂನಿಯನ್ ಆಫ್ ಅಗ್ರಿಕಲ್ಚರಲ್ ವರ್ಕ್ ಕಮಿಟಿ, ಬಿಸನ್ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್, ಯೂನಿಯನ್ ಆಫ್ ಪೆಲೆಸ್ತೀನ್ ವುಮೆನ್ ಕಮಿಟಿಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ನಿಯೋಜಿಸುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಬೆನ್ನೀ ಗಾಂಟ್ಸ್ ಶುಕ್ರವಾರ ಹೇಳಿದ್ದರು.







