ಮಡಿಕೇರಿ : ಕೂದಲು ತಿಂದ ಯುವತಿಯ ಹೊಟ್ಟೆಯಲ್ಲಿತ್ತು ಒಂದೂವರೆ ಕೆಜಿ ತೂಕದ ಗಡ್ಡೆ

ಮಡಿಕೇರಿ ಅ.26 : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬರ ಹೊಟ್ಟೆಯಿಂದ ಸುಮಾರು ಒಂದೂವರೆ ಕೆಜಿ ತೂಕದ ಕೂದಲಿನ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಮಡಿಕೇರಿಯ ವೈದ್ಯರು ಯಶಸ್ವಿಯಾಗಿದ್ದಾರೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಿಲ್ಲಾ ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬರು ದಾಖಲಾಗಿದ್ದರು. ಸ್ಕ್ಯಾನ್ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಕೂದಲಿನಿಂದ ಕೂಡಿದ ಗೆಡ್ಡೆಯೊಂದು ಕಂಡು ಬಂದಿತ್ತು.
ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಅಜಿತ್ ಕುಮಾರ್ ನೇತೃತ್ವದ ವೈದ್ಯರ ತಂಡ ಒಂದೂವರೆ ಕೆಜಿ ತೂಕದ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆಗೊಳಗಾದ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಯುವತಿ ಕೂದಲನ್ನು ಕಿತ್ತು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಶಸ್ತ್ರ ಚಿಕಿತ್ಸೆ ಸಂದರ್ಭ ಡಾ.ಅಭಿನಂದನ್, ಡಾ.ಪೊನ್ನಪ್ಪ, ಡಾ.ಪ್ರವೀಣ್ ಕುಮಾರ್, ಡಾ.ತಾರನಂದನ್ ಹಾಗೂ ಡಾ.ಪ್ರದೀಪ್ ವೈದ್ಯಕೀಯ ತಂಡದಲ್ಲಿದ್ದರು.





