ಪ್ರಾಕೃತಿಕ ವಿಪತ್ತು: ಭಾರತಕ್ಕೆ 65 ಲಕ್ಷ ಕೋಟಿ ರೂ. ನಷ್ಟ

ಸಾಂದರ್ಭಿಕ ಚಿತ್ರ:PTI
ಜಿನೆವಾ, ಅ.26: ಭಾರತವು 2020ರಲ್ಲಿ ಉಷ್ಣವಲಯದ ಚಂಡಮಾರುತ , ನೆರೆ ಮತ್ತು ಕ್ಷಾಮದಿಂದಾಗಿ ಸುಮಾರು 65 ಲಕ್ಷ ಕೋಟಿ ರೂ.ನಷ್ಟು ನಷ್ಟ ಅನುಭವಿಸಿದೆ. ಚೀನಾಕ್ಕೆ ಸುಮಾರು 178 ಲಕ್ಷ ಕೋಟಿ ನಷ್ಟವಾಗಿದ್ದು ಇದು ಏಶ್ಯದ ದೇಶಗಳಲ್ಲೇ ಅತ್ಯಧಿಕವಾಗಿದೆ ಎಂದು ವಿಶ್ವ ಹವಾಮಾನ ಶಾಸ್ತ್ರ ಸಂಸ್ಥೆ ಮಂಗಳವಾರ ಬಿಡುಗಡೆಗೊಳಿಸಿದ ‘ಏಶ್ಯದಲ್ಲಿನ ಹವಾಮಾನ ರಿಸ್ಥಿತಿ’ ಎಂಬ ಶೀರ್ಷಿಕೆಯ ವರದಿ ತಿಳಿಸಿದೆ.
ಭೂಮಿ ಮತ್ತು ಸಾಗರದ ತಾಪಮಾನದಲ್ಲಿ ಆಗುವ ಬದಲಾವಣೆ, ಮಳೆಯ ಪ್ರಮಾಣದಲ್ಲಿ ಬದಲಾವಣೆ, ನೀರ್ಗಲ್ಲುಗಳ ಕರಗುವಿಕೆ, ಸಮುದ್ರದ ಮಂಜುಗಡ್ಡೆ ಕುಗ್ಗುವುದು, ಸಮುದ್ರದ ಮಟ್ಟ ಏರಿಕೆ ಮುಂತಾದ ಹವಾಮಾನ ಬದಲಾವಣೆ ಮತ್ತು ಅದರಿಂದ ಉಂಟಾಗುವ ಸಾಮಾಜಿಕ ಆರ್ಥಿಕ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಿ ಸಿದ್ಧಪಡಿಸಿರುವ ಈ ವರದಿಯನ್ನು ಅಕ್ಟೋಬರ್ 31ರಂದು ಸ್ಕಾಟ್ಲ್ಯಾಂಡ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಅಧಿವೇಶನಕ್ಕೂ ಮುನ್ನ ಬಿಡುಗಡೆಗೊಳಿಸಲಾಗಿದೆ.
ಪ್ರಾಕೃತಿಕ ವಿಪತ್ತುಗಳಿಂದ ಕೃಷಿ ಮತ್ತು ಆಹಾರ ನಷ್ಟವಾಗಿದೆ. ವಲಸಿಗರ ಮತ್ತು ನಿರಾಶ್ರಿತರ ಸಮಸ್ಯೆ ಹೆಚ್ಚಳವಾಗಿದ್ದು ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಪರಿಸರದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಜತೆಗೆ ಪ್ರಾಕೃತಿಕ ಪರಿಸರ ವ್ಯವಸ್ಥೆಯನ್ನು ನಷ್ಟಗೊಳಿಸಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪೆಟರಿ ತಾಲಸ್ ಹೇಳಿದ್ದಾರೆ. ದಕ್ಷಿಣ ಮತ್ತು ಪೂರ್ವ ಏಶ್ಯದಲ್ಲಿ ಬೇಸಿಗೆ ಮಳೆ 2020ರಲ್ಲಿ ಅಸಹಜವಾಗಿ ಸಕ್ರಿಯವಾಗಿದ್ದು ಹಲವು ದೇಶಗಳಲ್ಲಿ ಜನರು ಮೃತಪಟ್ಟಿದ್ದಾರೆ.
2020ರ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಸುಂದರ್ಬನ ವಲಯದಲ್ಲಿ ಅಪ್ಪಳಿಸಿದ್ದ ಅಂಫಾನ್ ಚಂಡಮಾರುತದಿಂದ ಭಾರತದಲ್ಲಿ 24 ಲಕ್ಷ ಜನತೆ ಸ್ಥಳಾಂತರಗೊಂಡಿದ್ದರೆ, ಬಾಂಗ್ಲಾದೇಶದಲ್ಲಿ 25 ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ಏಶ್ಯದಲ್ಲಿ ಸಾಗರದಲ್ಲಿ ಉಷ್ಣಾಂಶ ಏರಿಕೆ ಪ್ರಮಾಣವೂ ಜಾಗತಿಕ ಸರಾಸರಿಗಿಂತ ಅಧಿಕವಾಗಿದ್ದು ಅರಬಿ ಸಮುದ್ರದಲ್ಲಿ ಈ ಪ್ರಮಾಣ ವಿಶ್ವದ ಸರಾಸರಿಗಿಂತ 3 ಟ್ಟು ಹೆಚ್ಚಿದೆ ಎಂದು ವರದಿ ಹೇಳಿದೆ.
ಹವಾಮಾನ ಬದಲಾವಣೆಯ ಸಮಸ್ಯೆ ನಿಯಂತ್ರಿಸಲು ಸೂಚಿಸಲಾಗಿರುವ ಸುಸ್ಥಿರ ಅಭಿವೃದ್ಧಿ ಗುರಿ 13(ಎಸ್ಡಿಜಿ 13)ರಲ್ಲಿ ಏಶ್ಯಾ ಖಂಡದ ಸಾಧನೆ ಅತ್ಯಂತ ಕಳಪೆಯಾಗಿದೆ. ಏಶ್ಯದ ದೇಶಗಳು ಎಸ್ಡಿಜಿ ಗುರಿಯಲ್ಲಿ ಸೂಚಿಸಲಾಗಿರುವ ಅಂಶಗಳಲ್ಲಿ 10% ಮಾತ್ರವನ್ನು 2030ರ ನಿಗದಿತ ಅವಧಿಯಲ್ಲಿ ತಲುಪುವ ಸಾಧ್ಯತೆಯಿದೆ ಎಂದು ತಾಲಸ್ ಹೇಳಿದ್ದಾರೆ.







