ಡಾರ್ಕ್‌ವೆಬ್: ಹಲವು ರಾಷ್ಟ್ರಗಳ ಪೊಲೀಸರ ಕಾರ್ಯಾಚರಣೆ150ಕ್ಕೂ ಅಧಿಕ ಶಂಕಿತರ ಬಂಧನ

ಬ್ರಸೆಲ್ಸ್, ಅ.26: ಡಾರ್ಕ್‌ವೆಬ್ ಮೂಲಕ ಆನ್‌ಲೈನ್‌ನಲ್ಲಿ ಅಕ್ರಮ ಮಾರಾಟ, ಖರೀದಿ ಪ್ರಕ್ರಿಯೆಯನ್ನು ಮಟ್ಟಹಾಕಲು ವಿಶ್ವದಾದ್ಯಂತ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 150 ಶಂಕಿತರನ್ನು ಬಂಧಿಸಲಾಗಿದೆ ಎಂದು ಯುರೋಪೋಲ್ ಮಾಹಿತಿ ನೀಡಿದೆ.
ಆಪರೇಷನ್ ಡಾರ್ಕ್‌ಹಂಟರ್ ಎಂಬ ಹೆಸರಿನ ಈ ಕಾರ್ಯಾಚರಣೆಯಲ್ಲಿ ಹಲವು ಮಿಲಿಯ ಮೌಲ್ಯದ ಯುರೋ ಕರೆನ್ಸಿ ಹಾಗೂ ಬಿಟ್‌ಕಾಯಿನ್‌ಗಳು, ಡ್ರಗ್ಸ್ ಮತ್ತು ಗನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಯುರೋಪಿಯನ್ ಯೂನಿಯನ್‌ನ ಪೊಲೀಸ್ ವಿಭಾಗ ಮಂಗಳವಾರ ಹೇಳಿದೆ. ಆಪರೇಷನ್ ಡಾರ್ಕ್ ಹಂಟರ್ ಎಂಬ ಕೋಡ್‌ವರ್ಡ್‌ನಡಿ ಆಸ್ಟ್ರೇಲಿಯಾ, ಬಲ್ಗೇರಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಸ್ವಿಝಲ್ಯಾಂಡ್, ಬ್ರಿಟನ್ ಮತ್ತು ಅಮೆರಿಕದಲ್ಲಿ ಪೊಲೀಸರು ಪ್ರತ್ಯೇಕ ಆದರೆ ಪೂರಕ ಕಾರ್ಯಾಚರಣೆ ನಡೆಸಿದ್ದರು. ಅಮೆರಿಕದಲ್ಲಿ 65, ಜರ್ಮನಿಯಲ್ಲಿ 47, ಇಟಲಿ ಮತ್ತು ನೆದರ್ಲ್ಯಾಂಡ್‌ನಲ್ಲಿ ತಲಾ 4 ಆರೋಪಿಗಳ ಸಹಿತ 150 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಯುರೋಪೋಲ್ (ಯುರೋಪಿಯನ್ ಯೂನಿಯನ್ ಏಜೆನ್ಸಿ ಫಾರ್ ಲಾ ಎನ್‌ಫೋರ್ಸ್‌ಮೆಂಟ್) ಹೇಳಿದೆ.
31 ಮಿಲಿಯನ್ ಡಾಲರ್ ಮೌಲ್ಯದ ಯುರೋಕರೆನ್ಸಿ, 45 ಬಂದೂಕು, 25,000 ಉತ್ತೇಜಕ ಮಾತ್ರೆ ಸಹಿತ 234 ಕಿ.ಗ್ರಾಂ ಮಾದಕ ವಸ್ತುಗಳನ್ನು ಜಫ್ತಿ ಮಾಡಲಾಗಿದೆ. ಇಟಲಿಯ ಪೊಲೀಸರು ಡೀಪ್‌ಸೀ ಮತ್ತು ಬೆರ್ಲುಸ್ಕೋನಿ ಮಾರ್ಕೆಟ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ 2 ಸಂಸ್ಥೆಗಳನ್ನು ಮುಚ್ಚಿಸಿದ್ದಾರೆ ಎಂದು ಯುರೋಪೋಲ್ ಹೇಳಿದೆ. ಯುರೋಪೋಲ್‌ನ ನಿರ್ದೇಶನದಲ್ಲಿ ಈ ಈ ಕಾರ್ಯಾಚರಣೆ ನಡೆದಿದೆ. ಡಾರ್ಕ್‌ವೆಬ್ ಮೂಲಕ ವ್ಯವಹಾರ ನಡೆಸುತ್ತಿರುವ ಕ್ರಿಮಿನಲ್‌ಗಳ ಬಗ್ಗೆ ಗಮನ ಹರಿಸಿ,
ಡಾರ್ಕ್‌ವೆಬ್ ಮೂಲಕ ನಡೆಸುತ್ತಿರುವ ಅಕ್ರಮ ವ್ಯವಹಾರಗಳಿಗೆ ಅವರನ್ನು ಹೊಣೆಗಾರರನ್ನಾಗಿಸುವ ಉದ್ದೇಶ ಈ ಜಾಗತಿಕ ಮಟ್ಟದ ಕಾರ್ಯಾಚರಣೆಯ ಹಿಂದಿದೆ ಎಂದು ಯುರೋಪೋಲ್‌ನ ಉಪ ನಿರ್ದೇಶಕ (ಕಾರ್ಯಾಚರಣೆ) ಜೀನ್ ಫಿಲಿಪ್ ಲೆಕಾಫೆ ಹೇಳಿದ್ದಾರೆ.
ಜರ್ಮನಿಯಲ್ಲಿ ಆಸ್ಟ್ರೇಲಿಯಾ ಮೂಲದ ವ್ಯಕ್ತಿಯೊಬ್ಬ ನಡೆಸುತ್ತಿದ್ದ ವಿಶ್ವದ ಬೃಹತ್ ಡಾರ್ಕ್‌ವೆಬ್ ಮಾರುಕಟ್ಟೆಯ ವ್ಯವಹಾರ ಜಾಲವನ್ನು ಈ ವರ್ಷಾರಂಭದಲ್ಲಿ ಅಲ್ಲಿನ ಪೊಲೀಸರು ಕುಟುಕು ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದ್ದರು. ಇಲ್ಲಿ ಮಾದಕ ವಸ್ತುಗಳು, ಕ್ರೆಡಿಟ್ ಕಾರ್ಡ್‌ಗಳಿಂದ ಕದಿಯಲಾದ ಮಾಹಿತಿ ಹಾಗೂ ಮಾಲ್‌ವೇರ್‌ಗಳ ಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಬಾಕ್ಸ್: ಡಾರ್ಕ್‌ವೆಬ್ ಎಂಬ ಗುಪ್ತ ವ್ಯವಹಾರ
ಡಾರ್ಕ್‌ವೆಬ್‌ನಲ್ಲಿ ವ್ಯವಹಾರವನ್ನು ಇಂಟರ್‌ನೆಟ್ ಜಾಲತಾಣವನ್ನು ಬಳಸಿಯೇ ನಡೆಸುವುದಾದರೂ ಇದರ ನಿರ್ವಹಣೆಗೆ ನಿರ್ಧಿಷ್ಟ ಸಾಫ್ಟ್‌ವೇರ್, ಸಂರಚನೆ ಅಥವಾ ದೃಢೀಕರಣದ ಅಗತ್ಯವಿದೆ. ಇದೊಂದು ಇಂಟರ್‌ನೆಟ್ ಸೈಟ್‌ಗಳ ಗುಪ್ತ ಸಮೂಹವಾಗಿದ್ದು ಇದರೊಳಗೆ ಪ್ರವೇಶಿಸಬೇಕಾದರೆ ವಿಶೇಷ ವೆಬ್‌ಬ್ರೌಸಿಂಗ್ ಸಾಫ್ಟ್‌ವೇರ್‌ನ ಅಗತ್ಯವಿದೆ. ಇದರಲ್ಲಿ ನಡೆಸುವ ಆನ್‌ಲೈನ್ ಚಟುವಟಿಕೆಗಳು ಬೇನಾಮಿ (ಅನಾಮಧೇಯ) ಮತ್ತು ಖಾಸಗಿಯಾಗಿರುವುದರಿಂದ ಕಾನೂನು ಜಾರಿ ಸಂಸ್ಥೆಗಳಿಗೆ ಈ ವ್ಯವಹಾರದಲ್ಲಿನ ಕ್ರಿಮಿನಲ್ ಸ್ವರೂಪವನ್ನು ಅಂದಾಜಿಸಲು ಕಷ್ಟವಾಗುತ್ತದೆ.







