ಪ್ರಬಲ ಜಾತಿಗಳು 2ಎ ವರ್ಗಕ್ಕೆ ಸೇರಿದರೆ, ನಮ್ಮ ಮುಂದಿನ ಪೀಳಿಗೆ ಆತ್ಮಹತ್ಯೆ ಮಾಡಿಕೊಂಡಂತೆ: ಎಂ.ಸಿ.ವೇಣುಗೋಪಾಲ್
ಬೆಂಗಳೂರು, ಅ.26 ರಾಜ್ಯದಲ್ಲಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಂದುವರೆದಿರುವ ಜಾತಿಗಳು ರಾಜ್ಯ ಸರಕಾರದ ಮೇಲೆ 2ಎ ಪ್ರವರ್ಗಕ್ಕೆ ಸೇರಿಸುವಂತೆ ಒತ್ತಡವನ್ನು ಹೇರುತ್ತಿವೆ. ಇಂತಹ ಒತ್ತಡದ ವಿರುದ್ದ ಸಂಘಟಿತವಾದ ಹೋರಾಟ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸಂಧರ್ಭ ಉಂಟಾಗಲಿದೆ ಎಂದು ಅತಿಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ವಿಷಾದ ವ್ಯಕ್ತಪಡಿಸಿದರು.
ಮಂಗಳವಾರ ಕುಮಾರ ಕೃಪಾ ಅತಿಥಿಗೃಹದಲ್ಲಿ ನಡೆದ ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಅಧಿಕಾರಿಗಳು ನೌಕರರು ಭಾಗಿಯಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದಂತಹ ಮುಂದುವರೆದ ಜಾತಿಗಳ ಸ್ವಾಮೀಜಿಗಳು ತಮ್ಮ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸುವಂತೆ ಒತ್ತಡವನ್ನು ಸರಕಾರದ ಮೇಲೆ ಹೇರುತ್ತಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಮುಂದುವರೆದ ಜಾತಿಗಳು ಅತಿ ಹಿಂದುಳಿದ ಸಮುದಾಯಕ್ಕೆ ಸೇರಿದ ಸಂವಿಧಾನಾತ್ಮಕ ಅಧಿಕಾರವನ್ನು ಕಸಿಯುವ ಪ್ರಯತ್ನದಲ್ಲಿ ತೊಡಗಿಕೊಂಡಿವೆ. ಇಂತಹ ಪ್ರಯತ್ನಗಳ ವಿರುದ್ದ ರಾಜ್ಯಾದ್ಯಂತ ಸಂಘಟಿತ ಹೋರಾಟದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಹಿಂದುಳಿದ ಸಮುದಾಯದ ಸ್ವಾಮೀಜಿಗಳ ಸಭೆಯನ್ನು ನಡೆಸಿದ್ದೇವೆ ಎಂದರು.
ಹಾಗೆಯೇ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಅತಿಹಿಂದುಳಿದ ಸಮುದಾಯಕ್ಕೆ ಸೇರಿದಂತಹ ಸ್ವಾಮೀಜಿಗಳು ಹಾಗೂ ನಿವೃತ್ತ ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ ರಾಜ್ಯಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ಮಾತನಾಡಿ, 2ಎ ಪ್ರವರ್ಗದಲ್ಲಿ ಕುಶಲಕರ್ಮಿಗಳ ಸಮುದಾಯಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಈ ಮೀಸಲಾತಿಯ ವರ್ಗದಲ್ಲಿ ರಾಜಕೀಯ ಹಾಗೂ ಆರ್ಥಿಕವಾಗಿ ಮುಂದುವರೆದ ಜಾತಿಗಳನ್ನು ಸೇರಿಸುವುದು ಸರಿಯಲ್ಲ. ಮುಂದುವರೆದ ಸಮುದಾಯದ ಸ್ವಾಮೀಜಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಗಡುವು ನೀಡುವ ಮಟ್ಟಕ್ಕೂ ಮುಂದುವರೆದಿದ್ದಾರೆ ಎಂದರು.
ರಾಜ್ಯಮಟ್ಟದಲ್ಲಿ ಬಲಿಷ್ಠ ಸಮುದಾಯದ ಒತ್ತಡ ಒಂದು ಕಡೆಯಾದರೆ, ಇನ್ನೊಂದೆಡೆ ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇ. 10 ರಷ್ಟು ಮೀಸಲಾತಿ ನೀಡುವ ಅಸಂವಿಧಾನಿಕ ಕ್ರಿಯೆ ಆರಂಭವಾಗಿದೆ. ಇವೆಲ್ಲವುಗಳ ಮಧ್ಯೆ ಅತಿಹಿಂದುಳಿದ ಜಾತಿಗಳು ಹೇಳಹೆಸರಿಲ್ಲದಂತೆ ಕಣ್ಮರೆಯಾಗಲಿವೆ. ಈ ನಿಟ್ಟಿನಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯದ ಎಲ್ಲಾ ಕ್ಷೇತ್ರದವರೂ ಒಗ್ಗಟ್ಟಿನ ಹೋರಾಟ ನಡೆಸುವುದು ಅತ್ಯವಶ್ಯಕ ಎಂದು ಅವರು ಹೇಳಿದರು.
ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ, ನಿರಂಜನ್ ಕೆಆರ್, ಬಿ.ಎನ್. ಕೃಷ್ಣಯ್ಯ, ಪ್ರಭಾಕರ್, ಮಾಜಿ ಕೆಪಿಎಸ್ಸಿ ಸದಸ್ಯ ಲಕ್ಷ್ಮಿನರಸಯ್ಯ, ಹಿರಿಯ ಅಧಿಕಾರಿ ಎಂ. ಲಕ್ಷ್ಮಣ್, ಹೆಚ್‍ಟಿ ಮೋಹನ್ ದಾಸ್, ಪಿ. ಮುನಿರಾಜಪ್ಪ, ಗೋಪಾಲಪ್ಪ, ಬಿಪಿ ಲಿಂಗಣ್ಣ, ಮತ್ತಿತರರು ಭಾಗವಹಿಸಿದ್ದರು.







