"ಅವರು ನಿಮಗಾಗಿ ಬರುತ್ತಾರೆ": ನಿರ್ದೇಶಕ ಅಬ್ಬಾಸ್ ಟೈರ್ ವಾಲಾ ಫೇಸ್ ಬುಕ್ ಪೋಸ್ಟ್ ವೈರಲ್
ಪ್ರಕಾಶ್ ಝಾ ವಿರುದ್ಧ ಬಜರಂಗಳದಿಂದ ಹಲ್ಲೆ ಹಿನ್ನೆಲೆಯಲ್ಲಿ ಬರೆದ ಬರಹ

Photo: Pintrest
ಹೊಸದಿಲ್ಲಿ: ಭೋಪಾಲದಲ್ಲಿ ಮೊನ್ನೆ ತಾನೇ ಸಿನಿಮಾ ನಿರ್ಮಾಪಕ ಪ್ರಕಾಶ್ ಝಾ ಹಾಗೂ ಆಶ್ರಮ್-3 ವೆಬ್ ಸೀರೀಸ್ ನ ಚಿತ್ರತಂಡದ ವಿರುದ್ಧ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ ಬೆನ್ನಲ್ಲೇ ʼಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವʼದ ಕುರಿತು ನಿರ್ದೇಶಕ ಅಬ್ಬಾಸ್ ಟೈರ್ ವಾಲಾ ಸಾಮಾಜಿಕ ತಾಣ ಖಾತೆಯಲ್ಲಿ ಪೋಸ್ಟ್ ಒಂದು ಪ್ರಕಟಿಸಿದ್ದು, ವೈರಲ್ ಆಗಿದೆ. "ಅವರು ನಿಮಗಾಗಿ ಬರುತ್ತಿದ್ದಾರೆ" ಎಂಬ ಶೀರ್ಷಿಕೆಯಲ್ಲಿ ಅವರು ಬರಹ ಪ್ರಕಟಿಸಿದ್ದಾರೆ.
ಅಬ್ಬಾಸ್ ಟೈರ್ ವಾಲಾ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದ ಬರಹದ ಪೂರ್ಣ ಪಠ್ಯ ಹೀಗಿದೆ.
"ನೀವು ಅವರ ಪರವಾಗಿ ಇದ್ದೀರಿ ಎಂದು ನೀವು ಭಾವಿಸುತ್ತೀರಾ? ಅವರು ʼತಪ್ಪುʼ ಎಂದು ಅಂದುಕೊಳ್ಳುವುದನ್ನು ನೀವು ಮಾಡುವವರೆಗೆ ಕಾಯಿರಿ. ಪ್ರದರ್ಶನವೊಂದನ್ನು ಮಾಡಿ, ಒಂದು ಹಾಡನ್ನು ಹಾಡಿ, ವಸ್ತ್ರಗಳನ್ನು ಧರಿಸಿ. ಸ್ನೇಹಿತರನ್ನು ಭೇಟಿಯಾಗಿ. ಪ್ರೀತಿಯಲ್ಲಿ ಬೀಳಿ. ಏನನ್ನಾದರೂ ತಿನ್ನಿ, ಏನನ್ನಾದರೂ ಕುಡಿಯಿರಿ. ಏನನ್ನಾದರೂ ಸೇದಿರಿ. ಪ್ರಾರ್ಥಿಸಿ, ಪ್ರಾರ್ಥಿಸದಿರಿ. ಏನಾದರೂ ಹೇಳಿ, ಹೇಳದೇ ಇರಿ. ಏನನ್ನಾದರೂ ಕೇಳಿ, ಏನನ್ನಾದರೂ ನಂಬಿ. ಆದರೆ ʼಮಂಜೂರುʼ ಮಾಡಿರುವುದನ್ನು ಹೊರತುಪಡಿಸಿ.
"ಅಧಿಕೃತವಾಗಿಯೇನೂ ಅಲ್ಲ. ಅಧಿಕೃತವಾಗಿ ನಾವು ಇನ್ನೂ ದೃಢವಾದ ಪ್ರಜಾಪ್ರಭುತ್ವ ಹೊಂದಿದ್ದೇವೆ. ನೆನಪಿದೆಯೇ?. ನಾವೆಲ್ಲರೂ ಒಟ್ಟಾಗಿ ಆಡುತ್ತೇವೆ ಮತ್ತು ನಮಗೆಲ್ಲರಿಗೂ ನಿಯಮಗಳು ಒಂದೇ ಆಗಿರುತ್ತವೆ. ಆದರೆ ಆಟದ ಮೈದಾನ ಮಾತ್ರ ಸಣ್ಣದಾಗಿ ಹೋಗುತ್ತದೆ ಮತ್ತು ನಿಯಮಗಳು ಹೆಚ್ಚು ನಿರ್ಬಂಧಿತವಾಗಿರುತ್ತವೆ ಮತ್ತು ಪ್ರತಿದಿನ ಉಸಿರುಗಟ್ಟಿಸುತ್ತವೆ."
"ಶೀಘ್ರದಲ್ಲೇ ಟ್ರ್ಯಾಕ್ ಮಾಡಲು ಹಲವಾರು ನಿಯಮಗಳಿರುತ್ತವೆ. ನೆನಪಿಡಲೂ ತುಂಬಾ ಇರುತ್ತದೆ. ತಿಳಿದುಕೊಳ್ಳಲೂ ಹಲವಾರಿರುತ್ತದೆ. ನೀವು, ಅಸ್ತಿತ್ವದಲ್ಲಿದೆ ಎಂದು ತಿಳಿದಿರದ ನಿಯಮಗಳನ್ನು ಮುರಿಯುತ್ತೀರಿ. ನೀವು ಆ ನಿಯಮಗಳನ್ನು ಮುಳಿದ ಬಳಿಕ ಅದಕ್ಕೆ ಹಲವರು ಬಲಿಯಾಗುತ್ತಾರೆ. ಸಹಾಯಕ್ಕಾಗಿ ಕಾಫ್ಕಾ ಅವರ 'ದಿ ಟ್ರಯಲ್' ಓದಿ."
"ಮುಂದಿನ ಸರದಿ ನಿಮ್ಮದಾಗಿರಲಿಕ್ಕಿಲ್ಲ. ಇದುವರೆಗೂ. ಆದರೆ ನೀವು ಜನಸಮೂಹದಲ್ಲಿರದಿದ್ದರೆ, ನಿಮ್ಮ ಸರದಿ, ನಿಮ್ಮ ಕುಟುಂಬದ ಸರದಿ, ನಿಮ್ಮ ಮಕ್ಕಳ ಸರದಿ ಅನಿವಾರ್ಯ. ʼಅವರುʼ ಒಬ್ಬರೇ ಇರುತ್ತಾರೆ. ಜೊತೆಗೆ ನಾವೆಲ್ಲರೂ..." ಎಂದು ಅವರು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.